ಉಡುಪಿ, ಮಾ26(SS): ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರ ಮನೆಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ ಕೇಂದ್ರದ ಗೌರವಾನ್ವಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜೊತೆ ಮಲ್ಪೆಯಲ್ಲಿರುವ ಮೀನುಗಾರರ ಮನೆಗೆ ಭೇಟಿ ಕೊಟ್ಟಾಗ ಮೀನುಗಾರರ ಕುಂಟುಬದವರು ತೀರಾ ನೊಂದು ಹೋಗಿದ್ದರು.
ಇದೇ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಾಣೆಯಾದ ಚಂದ್ರಶೇಖರ, ದಾಮೋದರ ಅವರ ಮನೆಗೆ ಹೋದಾಗ ಮನೆಯಲ್ಲಿ ಕಣ್ಣೀರ ಕೋಡಿಯೇ ಹರಿಯಿತು. ಇಬ್ಬರು ಮೀನುಗಾರರ ಪತ್ನಿಯರ ಆಕ್ರಂದನ ನೋಡಿ ರಕ್ಷಣಾ ಸಚಿವೆ ಅಸಹಾಯಕರಾಗಿ ಒಮ್ಮೆ ಮೂಕವಿಸ್ಮಿತರಾಗಿದ್ದರು.
ಈ ಸಂದರ್ಭ ದುಃಖಿತರನ್ನು ಸಮಾಧಾನಪಡಿಸಿದ ರಕ್ಷಣಾ ಸಚಿವರು, ನಾಪತ್ತೆಯಾದವರನ್ನು ಆದಷ್ಟು ಬೇಗ ಹುಡುಕಿ ಕೊಡುತ್ತೇವೆ. ಘಟನೆ ನಡೆದ ದಿನದಿಂದ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿ ಭರವಸೆ ನೀಡಿದ್ದಾರೆ.
ಸಚಿವೆ ಭೇಟಿ ಹಿನ್ನೆಲೆಯಲ್ಲಿ ಮನೆಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಯಿತು. ಬೆಳಗ್ಗೆ 8 ಗಂಟೆಯಿಂದಲೇ ಪೊಲೀಸರು ಸ್ಥಳದಲ್ಲಿ ಹಾಜರಿದ್ದು, ಶ್ವಾನದ ಮೂಲಕ ತಪಾಸಣೆ ಮಾಡಲಾಯಿತು. ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘಪತಿ ಭಟ್, ಲಾಲಾಜಿ ಆರ್.ಮೆಂಡನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು.