ಉಳ್ಳಾಲ, ಮೇ 04 (DaijiworldNews/SM): ಡಿವೈಎಫ್ ಐ ಸಂಘಟನೆ ಹಾಗೂ ಸಾರ್ವಜನಿಕರು ಸಣ್ಣ ನೀರಾವರಿ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೆ ಎ.4 ರಂದು ಹರೇಕಳ-ಅಡ್ಯಾರ್ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ ಗೇಟುಗಳನ್ನು ಅಕ್ರಮವಾಗಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೊಣಾಜೆ ಠಾಣೆಯಲ್ಲಿ ನೀಡಿದ ದೂರಿನ ಆಧಾರದಂತೆ ಡಿವೈಎಫ್ ಐ ವಿರುದ್ಧ ಪ್ರಕರಣ ದಾಖಲಾಗಿದೆ.
ಹರೇಕಳ ಎಂಬಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯು ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಮಂಜೂರುಗೊಂಡಿದ್ದು, ಕಾಮಗಾರಿ ನಡೆದು, ಕಾಮಗಾರಿಯು ಮಾ.31ರಂದು ಪೂರ್ಣಗೊಂಡಿತ್ತು. ಮಾ.29ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೇತುವೆಗೆ ಆಳವಡಿಸಿರುವ ಗೇಟುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಅದರೆ ಎ.04 ರಂದು ಬೆಳಿಗ್ಗೆ 07-45 ಗಂಟೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಘಟನೆ ಹಾಗೂ ಸಾರ್ವಜನಿಕರು ಇಲಾಖಾ ವತಿಯಿಂದ ಯಾವುದೇ ಅನುಮತಿ ಪಡೆಯದೇ ಸಮಾನ ಉದ್ದೇಶದಿಂದ ಆಕ್ರಮಕೂಟ ಸೇರಿ ಹರೇಕಳ ಸೇತುವೆಗೆ ಆಳವಡಿಸಲಾಗಿರುವ ತಾತ್ಕಾಲಿಕ ಗೇಟುಗಳನ್ನು ಆಕ್ರಮವಾಗಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಆದರೂ ಸಹ ಗುತ್ತಿಗೆದಾರರು ಗೇಟುಗಳನ್ನು ಹಾಕಿ ವಾಹನ ಸಂಚಾರವನ್ನು ನಿಯಂತ್ರಣದಲ್ಲಿರಿಸಿದ್ದರು. ಆದರೂ ಅದೇ ದಿನ ರಾತ್ರಿ 9-15 ಗಂಟೆ ಸಮಯಕ್ಕೆ ಹಾಕಿದ್ದ ತಾತ್ಕಾಲಿಕ ಗೇಟುಗಳನ್ನು ಸಂಪೂರ್ಣವಾಗಿ ಯಾವುದೇ ಅನುಮತಿಯಿಲ್ಲದೇ ಅಕ್ರಮವಾಗಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಈ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಮಂಗಳೂರು ಇದರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಷ್ಣು ಕಾಮತ್ ಎಂಬವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.