ಕಾಸರಗೋಡು, ಮೇ 04 (DaijiworldNews/MS): ಸೈಬರ್ ದಾಳಿಯಿಂದ ಮನನೊಂದು ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಕಾಸರಗೋಡಿನ ವಸತಿಗೃಹವೊಂದರಲ್ಲಿಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೊಟ್ಟಾಯಂ ಕೋದನಲ್ಲೂರಿನ ಅರುಣ್ ವಿದ್ಯಾಧರನ್ ( 32) ಮೃತಪಟ್ಟವ .ಕಾಞ೦ಗಾಡ್ ನ ವಸತಿಗೃಹವೊಂದರಲ್ಲಿ ಗುರುವಾರ ಮಧ್ಯಾಹ್ನಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೋದನಲ್ಲೂರಿನ ಆದಿರಾ ಮುರಳೀಧರನ್ ( 26)ಎಂಬಾಕೆಯ ಆತ್ಮಹತ್ಯೆ ಬಳಿಕ ಈತ ತಲೆಮರೆಸಿಕೊಂಡಿದ್ದು, ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು. ಆರೋಪಿ ಕೇರಳ ಬಿಟ್ಟು ಪರಾರಿಯಾಗಿದ್ದಾಗಿ ಮೊಬೈಲ್ ಟವರ್ ಲೊಕೇಶನ್ ನಿಂದ ಪತ್ತೆಯಾದ ಹಿನ್ನಲೆಯಲ್ಲಿ ಕೊಯಂಬತ್ತೂರಿಗೂ ತೆರಳಿ ಪೊಲೀಸರು ಶೋಧ ನಡೆಸಿದ್ದರು . ಆರೋಪಿಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದರು. ಈ ನಡುವೆ ಗುರುವಾರ ಕಾಞ೦ಗಾಡ್ ನ ವಸತಿಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈತ ಫೈನಾಪಲ್ ವ್ಯಾಪಾರಿ ಎಂದು ಮಲಪ್ಪುರಂ ಪೆರಿಂದಲಮಣ್ಣದ ರಾಜೇಶ್ ಕುಮಾರ್ ಎಂಬ ನಕಲಿ ವಿಳಾಸ ನೀಡಿ ಮೇ ಎರಡರಂದು ವಸತಿಗೃಹದಲ್ಲಿ ಕೊಠಡಿ ಪಡೆದಿದ್ದ. ಕೊಠಡಿಯಿಂದ ವೋಟರ್ ಐಡಿ , ಡ್ರೈವಿಂಗ್ ಲೈಸನ್ಸ್ ಪತ್ತೆಯಾಗಿದ್ದು , ಹೀಗಾಗಿ ಆರೋಪಿಯ ನೈಜ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿತ್ತು. ಏಪ್ರಿಲ್ ೩೦ ರಂದು ಕೊಟ್ಟಾಯಂ ಕಡತುರುತ್ತಿ ಕೋದನಲ್ಲೂರಿನ ಆದಿರಾ ಮನೆಯ ಕೋಣೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಅದಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದನು . ಹೀಗಾಗಿ ಆದಿರಾ ಅವರು ಅರುಣ್ ಜೊತೆಗಿನ ಸ್ನೇಹವನ್ನು ತ್ಯಜಿಸಿದ್ದಳು. ಅದಿರಾಗೆ ಮದುವೆ ಪ್ರಸ್ತಾಪ ಬರುತ್ತಿವೆ ಎಂಬುದನ್ನುತಿಳಿದುಕೊಂಡಿದ್ದ ಅರುಣ್, ಸೋಷಿಯಲ್ ಮೀಡಿಯಾ ಮೂಲಕ ಅದಿರಾಳನ್ನು ನಿಂದಿಸಿದ್ದನಂತೆ. ಫೇಸ್ಬುಕ್ ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್ ಮಾಡಿ ಮಾನಹಾನಿಕರವಾಗಿ ಬರಹಗಳನ್ನು ಹಾಕಿದ್ದು ಇದರ ಬಗ್ಗೆ ಅದಿರಾ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತುಂಬಾ ನೊಂದುಕೊಂಡಿದ್ದ ಆಕೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821