ಮಂಗಳೂರು, ಮೇ 03 (DaijiworldNews/HR): ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಳೆಯಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆ 2019 ರಲ್ಲಿ ಕಂಡು ಬಂದಿತ್ತು, ಇದೀಗ ಕಂಡುಬರುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುವುದು, ಈ ದಿಸೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರು ಹೊರತುಪಡಿಸಿ ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡುವ ವಿದ್ಯುತ್ ಚಕ್ತಿ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂನವರಿಗೆ ಜಲ್ಲಾಧಿಕಾರಿಯವರು ಸೂಚಿಸಿದರು.
ಮಾರ್ಚ್, ಏಪ್ರಿಲ್ನಲ್ಲಿ ಮಳೆ ಬಂದಿಲ್ಲ, ಮುಂದಿನ ದಿನಗಳಲ್ಲಿ ಮಳೆ ಯಾಗದಿದ್ದರೆ ನೀರು ಪೂರೈಕೆಯಲ್ಲಿ ರೇಷನಿಂಗ್ ವ್ಯವಸ್ಥೆ ಅನಿವಾರ್ಯವಾಗಲಿದೆ ಹಾಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ, ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ, ಸುರತ್ಕಲ್ ಹಾಗೂ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಪರ್ಯಾಯ ದಿನಗಳಲ್ಲಿ ನೀರು ಪೂರೈಸುವಂತೆ ತಿಳಿಸಿದವರು.
ಈ ಸಂದರ್ಭದಲ್ಲಿ ಪೈಪ್ಲೈನ್ ಹಾನಿಯಾಗಿರುವುದು ಕಂಡುಬಂದಲ್ಲಿ ಕೂಡಲೇ ದುರಸ್ತಿ ಪಡಿಸಬೇಕು ಎಲ್ಲಿಯೂ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಮಾತನಾಡಿ, ತುಂಬೆ ವೆಂಟೆಡ್ ಡ್ಯಾಂನಲ್ಲಿ ಇದೀಗ ನೀರಿನ ಮಟ್ಟವು 4.34 ಮೀ ಇದೆ. ಪ್ರಸ್ತುತ ಲಭ್ಯವಿರುವ ನೀರಿನ ಮಟ್ಟದನ್ವಯ ಮುಂದಿನ 20 ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದ್ದು, ಮೇ ಅಂತ್ಯದವರೆಗೆ ಮಳೆ ಬಾರದೇ ಇದ್ದಲ್ಲಿ, ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ರೇಷನಿಂಗ್ ಮೂಲಕ ಎಂದು ಸರಬರಾಜು ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಮಾಣಿ ಮತ್ತು ಸರಪಾಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿದ್ದು, ಎ.ಎಂ.ಆರ್, ಡ್ಯಾಂನ ನೀರನ್ನು ಅಭಾರವನ್ನಾಗಿರಿಸಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಎ.ಎಂ.ಆರ್. ಡ್ಯಾಂ ನ ಡೌನ್ಸ್ಟ್ರೀಮ್ ನಲ್ಲಿ ಲಭ್ಯವಿರುವ ನೀರನ್ನು ಪಂಪ್ ಮೂಲಕ ಲಿಫ್ಟ್ಮಾಡಿ ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನಾಲ್ಕು ಎಂ.ಎಲ್.ಡಿಯಷ್ಟು ನೀರಿನ ಅವಶ್ಯಕತೆ ಇದ್ದು, ಪ್ರಸ್ತುತ ನೀರಿನ ಲಭ್ಯತೆಯನುಸಾರ ಪರ್ಯಾಯ ದಿನಗಳಿಗೆ 2 ಎಂ.ಎಲ್.ಡಿಯನ್ನು ನೀರನ್ನು ಪಂಪ್ ಮಾಡಲಾಗುತ್ತಿದೆ. ಉಳ್ಳಾಲ ತಾಲೂಕಿನ ನರಿಂಗಾನ, ಬಾಳಪುಣೆ, ಕೊಣಾಜೆ, ತಲಪಾಡಿ ಪ್ರದೇಶಗಳಲ್ಲಿ ನೀರಿನಮೂಲಗಳು ಇರುವುದಿಲ್ಲ. ಈ ಪ್ರದೇಶಗಳಲ್ಲಿ ಬೋರ್ವೆಲ್ಗಳನ್ನು ಕೊರೆಯಲಾಗಿದ್ದರೂ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಪ್ರಸ್ತುತ 58 ಬೋರ್ವೆಲ್ಗಳನ್ನು ಡೀಪೆನ್ನಿಂಗ್, ಫ್ಲಷಿಂಗ್ ಮಾಡಲಾಗಿರುತ್ತದೆ. ಬೋರ್ ವೆಲ್ಗಳ ಡೀಪೆನ್ನಿಂಗ್ ಮತು ಫ್ಲಷಿಂಗ್ ಕಾರ್ಯಗಳಿಗೆ ತಗುಲುವ ವೆಚ್ಚವನ್ನು 15ನೇ ಹಣಕಾಸು ನಿಧಿಯಿಂದ ಭರಿಸಲಾಗುತ್ತಿದೆ. ಪ್ರಸ್ತುತ ಎ.ಎಂ.ಆರ್.ಡ್ಯಾಂ ನಲ್ಲಿ ಲಭ್ಯವಿರುವ ನೀರಿನ (13.20ಮೀ) ಮಟ್ಟದಾನುಸಾರ ಮುಂದಿನ 15 ರಿಂದ 20 ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದರು.
ಮೆಸ್ಕಾಂನಿಂದ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮಾತನಾಡಿ, ನದಿಯ ಇಕ್ಕೆಲಗಳಲ್ಲಿ ಆರ್.ಆರ್ ನಂಬರ್ ಇರುವ 28 ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ, ಯಾವುದೇ ಅನಧಿಕೃತ ಪ್ರಕರಣಗಳು ಕಂಡುಬಂದಿರುವದಿಲ್ಲ ಎಂದರು.
ಎಂ.ಆರ್.ಪಿ.ಎಲ್. ಸಂಸ್ಥೆಯು, ಪ್ರಸ್ತುತ ಎ.ಎಂ.ಆರ್, ಡ್ಯಾಂ ನಿಂದ 20% ನೀರನ್ನು ಕುಡಿಯುವ ಉದ್ದೇಶಕ್ಕೆ ಲಿಫ್ಟ್ ಮಾಡುತ್ತಿರುವುದಾಗಿ ಹಾಗೂ ಎಸ್.ಇ.ಝಡ್. ನವರು ಎ.ಎಂ.ಆರ್.ಡ್ಯಾಂ ನಿಂದ ನೀರೆತ್ತುವುದನ್ನು ಸಂಪೂರ್ಣ ಸ್ಥಗಿತಗೊಳಿಸಿರುವದಾಗಿ ಸಂಸ್ಥೆಯ ಪ್ರತಿನಿಧಿಗಳು ಸಭೆಗೆ ತಿಳಿಸಿದರು.