ಉಡುಪಿ, ಮೇ 03 (DaijiworldNews/HR): ಬಿಜೆಪಿಯು ಉಡುಪಿ ವಿಧಾನ ಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ, "ಮುಂದಿನ 5 ವರ್ಷಗಳ ಅಭಿವೃದ್ಧಿ, ಉಡುಪಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಕ್ಕೆಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಪ್ರಮುಖವಾಗಿ ನಗರದಲ್ಲಿ ಬಹುಮಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಕಲ್ಸಂಕ ಜಂಕ್ಷನ್ ನಲ್ಲಿ 70 ಮೀಟರ್ ವ್ಯಾಸವುಳ್ಳ ಸಿಗ್ನಲ್ ರಹಿತ ಮಧ್ವಾಚಾರ್ಯ ವೃತ್ತ ನಿರ್ಮಾಣ, ಒಳಚರಂಡಿ ವ್ಯವಸ್ಥೆಯ ಪುನನಿರ್ಮಾಣ, 35 ವಾರ್ಡ್ ನಲ್ಲಿ ವೈಜ್ಞಾನಿಕ ರೀತಿಯಲ್ಲಿ ಒಳ ಚರಂಡಿ ವ್ಯವಸ್ಥೆ, ಮಲ್ಪೆಯಲ್ಲಿ ಮಧ್ವಾಚಾರ್ಯ ಥೀಮ್ ಪಾರ್ಕ್ ನಿರ್ಮಾಣ, ಮಣಿಪಾಲದಲ್ಲಿ ವಿಶೇಷ ಆಹಾರ ವಲಯ ನಿರ್ಮಾಣ, ಮಣಿಪಾಲದ ಮಣ್ಣಪಳ್ಳದಲ್ಲಿ ಉದ್ಯಾನವನ ನಿರ್ಮಾಣ, ಸ್ವರ್ಣ ನದಿ ತೀರದಲ್ಲಿರುವ ಸರಕಾರಿ ದ್ವೀಪದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ, ನದಿ ದಂಡೆಗಳ ಸಂರಕ್ಷಣೆ, ವಾರಾಹಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಸೀತಾನದಿಗೆ ನಿರಂತರವಾಗಿ ನೀರು ಹಾಯಿಸಿ ಜೀವ ತುಂಬುವ ಯೋಜನೆಗಳನ್ನು ನಮ್ಮ ಪ್ರಣಾಳಿಕೆ ಒಳಗೊಂಡಿದೆ" ಎಂದರು.
ಇದೇ ಸಂಧರ್ಭದಲ್ಲಿ ಮಲ್ಪೆ ಬಂದರು ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಆದ್ಯತೆಗಾಗಿ ವಿಶೇಷ ಪ್ರಣಾಳಿಕೆಯನ್ನು ಕೂಡಾ ಉಡುಪಿ ಬಿಜೆಪಿ ಬಿಡುಗಡೆಗೊಳಿಸಿದೆ. ಈ ವಿಶೇಷ ಪ್ರಣಾಳಿಕೆಯಲ್ಲಿ ನಾಡದೋಣಿ ಮೀನುಗಾರರರಿಗೆ ನಿರಂತರವಾಗಿ ತಿಂಗಳಿಗೆ 500 ಲೀಟರ್ ಸೀಮೆ ಎಣ್ಣೆ ವರ್ಷದ ಹನ್ನೆರಡು ತಿಂಗಳು ನೀಡುವುದು,ಕೃಷಿ ಕ್ಷೇತ್ರಕ್ಕೆ ಇರುವ ಸೌಲಭ್ಯವನ್ನು ಮೀನುಗಾರಿಕಾ ಕ್ಷೇತ್ರಕ್ಕೆ ವಿಸ್ತರಣೆ, ನಾಡದೋಣಿ ಮೀನುಗಾರರ ದೋಣಿಗಳು ತಂಗುದಾಣಕ್ಕೆ 3ನೇ ಹಂತದ ಬಳಿ ಜಟ್ಟಿ ನಿರ್ಮಾಣ, ಒಣ ಮೀನುಗಾರಿಕೆ ಮಾಡುವ ಮಹಿಳಾ ಮೀನುಗಾರರರಿಗೆ ಅವರು ಈಗಾಗಲೇ ಉಪಯೋಗಿಸುತ್ತಿರುವ ಜಾಗವನ್ನು 30 ವರ್ಷ ಧೀರ್ಘ ಗುತ್ತಿಗೆ ವಿಸ್ತರಣೆ,ಮೀನುಗಾರ ಮಹಿಳೆಯರಿಗೆ 0% ಬಡ್ಡಿಯಲ್ಲಿ 5 ಲಕ್ಷದಿಂದ 20 ಲಕ್ಷದವರೆಗೆ ಗುಂಪು ಸಾಲ ನೀಡುವುದು, ಮೀನುಗಾರರರಿಗೆ ಮತ್ಸಾಶ್ರಯ ಮನೆ ನಿರ್ಮಾಣಕ್ಕೆ ಸಹಾಯಧನ 1.2ಲಕ್ಷದಿಂದ 5ಲಕ್ಷಕ್ಕೆ,ಮಹಿಳಾ ಮೀನುಗಾರರರಿಗೆ ಮತ್ಯವಾಹಿನಿ ವಾಹನ ಸೌಲಭ್ಯ, ಆರೋಗ್ಯ ಸುರಕ್ಷತೆಯ ತುರ್ತು ಸೀ- ಆಂಬ್ಯುಲೆನ್ಸ್ ಸೇವೆ ಗಳ ಭರವಸೆಗಳನ್ನು ಉಡುಪಿ ಬಿಜೆಪಿ ನೀಡಿದೆ.
ಸಭೆಯಲ್ಲಿ ಶಾಸಕ ರಘುಪತಿ ಭಟ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಚೆ ವೀಣಾ ನಾಯ್ಕ್, ಎಸ್ ಸಿ – ಎಸ್ ಟಿ ಮೋರ್ಚಾದ ದಿನಕರ್ ಕಟ್ಟೆಗುಡ್ಡೆ, ಪ್ರಣಾಳಿಕೆ ರಚನಾ ಸಮಿತಿಯ ಸಂಚಾಲಕರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ಸದಸ್ಯರಾದ ಮಂಜುನಾಥ್ ಮಣಿಪಾಲ, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.