ಕುಂದಾಪುರ, ಮೇ 03 (DaijiworldNews/HR): ಸರ್ವೀಸ್ ಸ್ಟೇಷನ್ನಿಂದ ಹೆದ್ದಾರಿಗೆ ಬಂದು ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಗಾಯಗೊಂಡಿರುವ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಸಮೀಪ ಪ್ರವಾಸಿ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ನಡೆದಿದ್ದು, ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಕುಮುಟಾ ಡಿಪೋದ ಕೆಎಸ್ಆರ್ಟಿಸಿ ಬಸ್ ಚಾಲಕ ಅಶೋಕ ಎಂಬುವರು ತಲ್ಲೂರಿನಲ್ಲಿರುವ ಅಶೋಕ ಲೇಲ್ಯಾಂಡ್ ಶೋ ರೂಮಿಗೆ ಬಸ್ಸನ್ನು ಕೊಂಡೊಯ್ದಿದ್ದು, ಸರ್ವೀಸ್ ಮಾಡಿಸಿಕೊಂಡು ವಾಪಾಸ್ಸು ಕುಮುಟಾಕ್ಕೆ ಹೋಗಲೆಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಕಡೆಗೆ ಬಂದು ಪ್ರವಾಸಿ ಪೆಟ್ರೋಲ್ ಬಂಕ್ ಸಮೀಪ ಯೂಟರ್ನ್ ತೆಗೆದುಕೊಳ್ಳುತ್ತಿದ್ದರು. ಇದೇ ಸಂದರ್ಭ ಕುಂದಾಪುರದಿಂದ ಗಂಗೊಳ್ಳಿಗೆ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿದ್ದ ಭಾರತಿ ಬಸ್ ಚಾಲಕ ಮನೋಹರ ನೇರವಾಗಿ ಬಂದು ಸರ್ಕಾರೀ ಬಸ್ಸಿನ ಹಿಂದುಗಡೆಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಖಾಸಗಿ ಬಸ್ಸಿನಲ್ಲಿದ್ದವರ ಪೈಕಿ ಒಂದು ಮಗು ಸಹಿತ ಮೂವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆದರೆ ಅದೃಷ್ಟವಷಾತ್ ಎಲ್ಲಾರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.