ಮೂಲ್ಕಿ, ಮೇ 03 (DaijiworldNews/MS): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶವಾಗಲಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ 'ಕೈ' ನಾಯಕರು ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲಿದ್ದು, ಈಗಾಗಲೇ 85% ಸರ್ಕಾರ ನಡೆಸಿದ್ದಾರೆ. ಕಾಂಗ್ರೆಸ್ ವಿಕಾಸದ ವಿರುದ್ಧವಿದ್ದು, ಶಾಂತಿಗೆ ಭಂಗವಾಗಲಿದೆ. ತುಷ್ಟೀಕರಣ ಬಯಸಿ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ. ಭಾರತೀಯ ಸೇನೆಯನ್ನು ನೋಡಿದರೆ ನಮ್ಮೆಲ್ಲರಿಗೂ ಗೌರವ, ಗರ್ವ ಎನಿಸುತ್ತದೆ. ಆದರೆ ಕೈ ನಾಯಕರಿಗೆ ಅಳು ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಮೀನುಗಾರರ ಸಮುದಾಯಕ್ಕೆ ಕಾಂಗ್ರೆಸ್ ಯಾವುದೇ ಸಚಿವಾಲಯ ನಿರ್ಮಿಸಲಿಲ್ಲ. ಮೀನುಗಾರರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ. ದೆಹಲಿಯಲ್ಲಿನ ಸರ್ಕಾರಕ್ಕೆ ಮತ್ಸ್ಯೋದ್ಯಮ ಅಸ್ತಿತ್ವದಲ್ಲಿದೆ ಎಂದೇ ತಿಳಿದಿರಲಿಲ್ಲ. ಆದರೆ ಮೀನುಗಾರರ ಸಮುದಾಯಕ್ಕಾಗಿ ನಮ್ಮ ಸರ್ಕಾರವೂ ಮೀನುಗಾರರ ಕಲ್ಯಾಣಕ್ಕಾಗಿಯೇ ಪ್ರತ್ಯೇಕವಾದ ಸಚಿವಾಲಯ ನಿರ್ಮಿಸಿದೆವು. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಸರ್ಕಾರವೂ ಮತ್ಸ್ಯ ಸಿರಿ ಯೋಜನೆ ಆರಂಭಿಸಿದೆ ಎಂದು ಹೇಳಿದ್ದಾರೆ.
ನಿಮ್ಮ ಮತದಿಂದ ಇಂದು ವಿಶ್ವದೆಲ್ಲೆಡೆ ಹಿಂದೂಸ್ತಾನದ ಪರವಾಗಿ ಜೈಕಾರ:
ವಿಶ್ವದೆಲ್ಲೆಡೆ ಹಿಂದೂಸ್ತಾನದ ಪರವಾಗಿ ಜೈಕಾರ ಹಾಕಲಾಗುತ್ತಿದೆ. ಇದಕ್ಕೆ ಕಾರಣ ನಿಮ್ಮ ಮತ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕರ್ನಾಟಕ ಸ್ಟಾರ್ಟ್ ಅಪ್ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಇದರಲ್ಲಿ ಸಾಮಾನ್ಯ ಕುಟುಂಬದ ಯುವಜನರೂ ಸಾಧನೆ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಹೆಚ್ಎಎಲ್ ಭಾರೀ ವಹಿವಾಟು ನಡೆಸಿದ್ದು, ಲಾಭದಾಯಕವಾಗಿದೆ. ದೆಹಲಿ & ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಇರಬೇಕಿದ್ದು, ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.