ಉಡುಪಿ, ಮೇ 03 (DaijiworldNews/HR): ಕಡಲತಡಿಯ ಈ ಭಾಗದಲ್ಲಿ ಮೀನುಗಾರರು ಬಹಳಷ್ಟು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ಇಷ್ಟೊಂದು ಜನರು ಸೇರಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದು ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕಡಲ ತಡಿಯ ಉಚ್ಚಿಲ ಬಡಾ ಗ್ರಾಮದಲ್ಲಿ ವಿನಯ ಕುಮಾರ್ ಸೊರಕೆ ಸಮ್ಮುಖದಲ್ಲಿ ಕರಾವಳಿ ಭಾಗದ 300ರಕ್ಕೂ ಮಿಕ್ಕ ಮೀನುಗಾರರ ಮುಖಂಡರು ಹಾಗೂ ಯುವಕ ಯುವತಿಯರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಗವೀರರನ್ನು ಕೇವಲ ಓಟ್ ಬ್ಯಾಂಕ್ ಆಗಿ ನಡೆಸಿಕೊಂಡ ಬಿಜೆಪಿ ಸರ್ಕಾರ ಬಹಳಷ್ಟು ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದೆ.ಕರಾವಳಿ ಭಾಗದ ಅಭಿವ್ರದ್ಧಿಗಾಗಿ ಕಾಂಗ್ರೆಸ್ ಈ ಬಾರಿ ವಿಶೇಷ ಅನುದಾನವನ್ನು, ವಿಶೇಷ ಪ್ರಣಾಳಿಕೆಯನ್ನು ಜಾರಿ ಮಾಡುವ ಪ್ರಾಮಾಣಿಕ ಭರವಸೆಯನ್ನು ನೀಡಿದೆ. ಭರಪೂರ ಕೊಡುಗೆಯನ್ನು ಕಾಂಗ್ರೆಸ್ ಈ ಬಾರಿ ಕರಾವಳಿ ಭಾಗಕ್ಕೆ ನೀಡುವ ವಾಗ್ದಾನವನ್ನು ಮಾಡಿದೆ .ಅದರ ಸಂಪೂರ್ಣ ಜವಬ್ದಾರಿ ನನ್ನ ಹೆಗಲ ಮೇಲಿದೆ ಎಂದರು.
ಇನ್ನು ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ದೀಪಕ್ ಎರ್ಮಳ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಶೇಖಬ್ಬಾ ಅವರ ನೇತ್ರತ್ವದಲ್ಲಿ ಬಹಳಷ್ಟು ಮಂದಿ ಇಳಿಹೊತ್ತಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮೊಗವೀರ ಮುಖಂಡರಾದ ಸುಕುಮಾರ್ ಬಂಗೇರ, ರೂಪೇಶ್ ಮೆಂಡನ್, ಜೀವನ್ ಮೆಂಡನ್, ಆನಂದ್ ತಿಂಗಳಾಯ, ಅನಿಶ್, ಯಶ್ವಂತ್ ಬಂಗೇರ, ಉಮೇಶ್ ಪೂಜಾರಿ, ದಯಾನಂದ ಕೋಟ್ಯಾನ್, ಶಿವಣ್ಣ ಬಂಗೇರ, ಲಕ್ಷ್ಮಣ್ ಗುರಿಕಾರ ಸೇರ್ಪಡೆಯ ನೇತ್ರತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಸುಕುಮಾರ್ ಬಂಗೇರರವರು ವಿನಯಕುಮಾರ್ ಸೊರಕೆಯವರ ಗೆಲುವಿಗೆ ಎಲ್ಲರೂ ಸೇರಿ ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು.