ಬಂಟ್ವಾಳ, ಮೇ 02 (DaijiworldNews/SM): ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ರಮಾನಾಥ ರೈ ಶುದ್ಧಹಸ್ತ ವ್ಯಕ್ತಿ. ಸರಳ, ಸಜ್ಜನಿಕೆಯ ಇವರ ವಿರುದ್ಧ ಆರೋಪ ಮಾಡಲೂ ಬಿಜೆಪಿಗರಿಗೆ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ, ಅವರ ವಿರುದ್ಧ ಸುಳ್ಳು ವದಂತಿಗಳನ್ನು ಹರಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಖ್ಯಾತ ನ್ಯಾಯವಾದಿ, ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ತಿಳಿಸಿದರು. ಅವರು ಪಲ್ಲಮಜಲುವಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳದಲ್ಲಿ ಶಾಂತಿಯಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಆಡಳಿತವಿರುವಾಗ ಬಂಟ್ವಾಳದ ಶಾಂತಿ ಕೆಡಿಸಿದವರು ಯಾರು ಎಂದೂ ಬಿಜೆಪಿಗರು ಹೇಳಬೇಕು. ಕಾಂಗ್ರೆಸಿಗರು ಯಾವುದೇ ಗಲಭೆ, ಹಿಂಸೆಯಲ್ಲಿ ಭಾಗಿಯಾದವರಲ್ಲ. ಬಂಟ್ವಾಳದಲ್ಲಿ ನಡೆದ ಹಿಂಸಾಚಾರಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಆರೋಪಿಗಳ ಸ್ಥಾನದಲ್ಲಿಲ್ಲ. ಕಾಂಗ್ರೆಸ್ ಯಾವತ್ತೂ ಶಾಂತಿ ಮತ್ತು ಸೌಹಾರ್ಧತೆಯನ್ನು ಬಯಸುವ ಪಕ್ಷ. ಹೀಗಾಗಿ, ಕಳೆದ ಐದು ವರ್ಷದಲ್ಲಿ ಬಂಟ್ವಾಳದಲ್ಲಿ ಶಾಂತಿಯಿದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ, ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ಮಾತನಾಡಿ, ಕಳೆದ ಚುನಾವಣೆಯಲ್ಲಿ ನನ್ನನ್ನು ಅಪಪ್ರಚಾರದಿಂದ ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿ. ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಸಂಬಂಧಿಸಿ ನನ್ನದೇ ಆದ ಕೆಲವೊಂದು ಕನಸುಗಳಿವೆ. ಆ ಕನಸುಗಳು ಪೂರ್ಣಗೊಂಡಿಲ್ಲ. ಇದು ನನ್ನ ಕೊನೆಯ ಚುನಾವಣೆ. ಮತ್ತೊಂದು ಅವಕಾಶ ನೀಡಿದರೆ, ಆ ಕನಸುಗಳನ್ನು ಪೂರ್ಣಗೊಳಿಸಲಿದ್ದೇನೆ ಎಂದು ಭರವಸೆ ನೀಡಿದರು.