ಉಡುಪಿ, ಮೇ 02 (DaijiworldNews/HR): ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಟ್ಟಿ ಭಾಗ್ಯಗಳನ್ನು ನೀಡಿರುವವರಿಗೆ ಯಾವ ರೀತಿಯ ಗ್ಯಾರಂಟಿ ಇದೆ ಬದಲಾಗಿ ಇದು ಸುಳ್ಳು ಭರವಸೆಗಳ ಪ್ರಣಾಳಿಕೆಯಲ್ಲದೆ ಬೇರೆನು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರ ನಡೆಸಿದಾಗ ನೀಡಿದ ಎಲ್ಲಾ ಭರವಸೆಗಳನ್ನು ಪೊರೈಸಿದ್ದು ಈ ಬಾರಿ ಕೂಡ ಅಧಿಕಾರಕ್ಕೆ ಬಂದರೆ ಜನರಿಗೆ ಉತ್ತಮ ಯೋಜನೆಯ ಗ್ಯಾರಂಟಿಯನ್ನು ನೀಡಿದ್ದು ಅದನ್ನು ಪೊರೈಸಲು ಬದ್ಧವಾಗಿದೆ. ಬಿಜೆಪಿಗರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿಕೊಂಡು ಬಂದಿದ್ದು ಈಗ ಪೊರೈಸಲು ಸಾಧ್ಯವಾಗದ ಸುಳ್ಳು ಭರವಸೆಗಳ ಬಿಟ್ಟಿ ಭಾಗ್ಯಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದೆ.
ಈ ಹಿಂದೆ ಇದೇ ಬಿಜೆಪಿ ಪಕ್ಷ ಗೋವಾ ಮತ್ತು ಉತ್ತರಪ್ರದೇಶ ರಾಜ್ಯದ ಚುನಾವಣೆಯಲ್ಲಿ ಕೂಡ 3 ಉಚಿತ ಸಿಲಿಂಡರ್ ನೀಡುವ ಭರವಸೆಯನ್ನು ನೀಡಿದ್ದು ಅಧಿಕಾರಕ್ಕೇರಿದ ನಂತರ ಆ ರಾಜ್ಯಗಳಲ್ಲಿ ಗ್ಯಾಸ್ ಇರುವ ಸಿಲಿಂಡರ್ ಇರಲಿ, ಕನಿಷ್ಠ ಖಾಲಿ ಸಿಲಿಂಡರ್ಗಳನ್ನೂ ಕೊಟ್ಟಿಲ್ಲ. ಈಗ ಅದೇ ನಾಟಕವನ್ನು ಕರ್ನಾಟಕದಲ್ಲಿ ಮಾಡಹೊರಟಿದ್ದು ಜನರನ್ನು ಮರಳು ಮಾಡುವ ಕೆಲಸ ಇದಾಗಿದೆ.
ಇಷ್ಟೇ ಅಲ್ಲದೆ 5 ಕೆಜಿ ಅಕ್ಕಿ ಜೊತೆ ಇನ್ನೂ 5 ಕೆಜಿ ಸಿರಿಧಾನ್ಯ ವಿತರಣೆ ವಿತರಣೆ ಮಾಡುವುದಾಗಿ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಭರವಸೆಯನ್ನು ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತಿದ್ದು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಮೊಟಕುಗೊಳಿಸಿದ್ದನ್ನು ಬಿಜೆಪಿಗರು ಮರೆತಿದ್ದಾರೆ. ಈಗಾಗಲೇ ನಂದಿನಿ ಹಾಲಿನ ಕೆಎಂಎಫ್ ಘಟಕವನ್ನು ಗುಜರಾತಿನ ಅಮುಲ್ನೊಂದಿಗೆ ವಿಲೀನ ಮಾಡಲು ಹೊರಟಿರುವ ಮೋದಿ ಸರಕಾರ ಕೇವಲ ಜನರ ಕಣ್ಣೊರೆಸುವ ನಿಟ್ಟಿನಲ್ಲಿ ಉಚಿತ ಹಾಲು ಪೊರೈಸುವ ಸುಳ್ಳು ಭರವಸೆ ನೀಡಿದೆ.
ಬಿಜೆಪಿಯ ಪ್ರಣಾಳಿಕೆ ಸಂಪೂರ್ಣ ಸುಳ್ಳಿನ ಕಂತೆಯಾಗಿದ್ದು ಕಳೆದ ಬಾರಿ ಅನ್ನಪೂರ್ಣ ಕ್ಯಾಂಟಿನ್ ತೆರೆಯುತ್ತೇವೆ ಎಂದು ಹೇಳಿ ಸಿದ್ದರಾಮಯ್ಯ ಸರಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟಿನ್ ಮುಚ್ಚಿದ್ದರು. ಒಟ್ಟಾರೆ ಭರಪೂರ ಸುಳ್ಳು ಭರವಸೆಗಳನ್ನು ನೀಡಿ ಕರ್ನಾಟಕದ ಜನರ ಕಿವಿಯ ಮೇಲೆ ಹೂವು ಇಡುವ ಕೆಲಸವನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಮಾಡಿದ್ದು ಮುಗ್ಧ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದ ಬಿಜೆಪಿಯನ್ನು ಒದ್ದೋಡಿಸಲು ಜನ ತೀರ್ಮಾನಿಸಿದ್ದಾರೆ. ಇದು ಕೇವಲ ಚುನಾವಣೆಯ ಗಿಮಿಕ್ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.