ಮಂಗಳೂರು,ಮೇ2(Daijiworld News/KH):ಕಾಂಗ್ರೆಸ್ ನೀಡಿದ ಭರವಸೆಗಳನ್ನು ರಾಜಸ್ಥಾನದಲ್ಲಿ ಈಡೇರಿಸಲಾಗಿದ್ದು, ಕರ್ನಾಟಕದಲ್ಲಿಯೂ ಅದೇ ರೀತಿ ಮಾಡಲಾಗುವುದು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೆಹ್ಲೋಟ್, “ಬಿಜೆಪಿ ಹನುಮಂತ ಮತ್ತು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಈ ರೀತಿಯ ರಾಜಕೀಯಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾರೂ ದೇವರ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು ಎಂದರು.
ರಾಜಸ್ಥಾನದಲ್ಲಿ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 85% ಭರವಸೆಗಳನ್ನು ನಾವು ಈಡೇರಿಸಿದ್ದೇವೆ ಎಂದು ಹೇಳಿದರು. ನಾವು ಐದು ಬಜೆಟ್ ಮಂಡಿಸಿದ್ದೇವೆ ಮತ್ತು ಯಾವುದೇ ತೆರಿಗೆಯನ್ನು ಹೆಚ್ಚಿಸಿಲ್ಲ. ನಮ್ಮ ಬಜೆಟ್ ಭರವಸೆಗಳಲ್ಲಿ 95% ಈಡೇರಿಸಿದ್ದೇವೆ ಎಂದಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಜನರನ್ನು ಭ್ರಮೆಯಲ್ಲಿಡುತ್ತಿದೆ. ಈ ಹಿಂದೆಯೂ ಅವರು ಸಿಎಎ ಜಾರಿಗೊಳಿಸುವ ನಾಟಕ ಆಡಿದ್ದರು. ಅವರಿಗೆ ಧೈರ್ಯವಿದ್ದರೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲಿ. ನಿಮ್ಮ ಸರ್ಕಾರಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮೊದಲು ಕೋಡ್ ಅನ್ನು ಜಾರಿಗೊಳಿಸಿ. ಪ್ರತಿ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಏಕೆ ಉಲ್ಲೇಖಿಸುತ್ತೀರಿ ಎಂದು ಪ್ರಶ್ನಿಸಿದರು.
ಹಣದುಬ್ಬರದ ಸಮಸ್ಯೆಗಳು ಎಲ್ಲ ರಾಜ್ಯಗಳಲ್ಲೂ ಇವೆ. ಅದರಿಂದ ಹೊರಬರಲು ಈ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಕೇರಳದಲ್ಲಿ ಎಡರಂಗದ ಸರ್ಕಾರವೂ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಿದೆ' ಎಂದು ಗೆಹ್ಲೋಟ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ನ ಭರವಸೆಯನ್ನು ಸಮರ್ಥಿಸಿಕೊಂಡರು.
ಕರ್ನಾಟಕದ ಜನರು ಸುಳ್ಳು ಬಿಜೆಪಿ ಪ್ರಣಾಳಿಕೆಯನ್ನು ನಂಬಬಾರದು. ಸಾರ್ವಜನಿಕರಿಗೆ ಏನು ಬೇಕು ಎಂಬುದರ ಕುರಿತು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಬಿಜೆಪಿ ಎಂದಿಗೂ ಸಮಸ್ಯೆಗಳ ಬಗ್ಗೆ ಅಥವಾ ಉತ್ತಮ ಆಡಳಿತದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ .