ಉಡುಪಿ, ಮೇ 02 (DaijiworldNews/HR): ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಚುನಾವಣಾ ಪ್ರಣಾಳಿಕೆಯನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಜಿಲ್ಲಾ ಮಾದ್ಯಮ ಕೇಂದ್ರದಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, "ಜಿಲ್ಲಾ ಮಟ್ಟದಲ್ಲಿ ನಮ್ಮ ಜಿಲ್ಲೆಗೆ ಅಭಿವೃದ್ಧಿ ಯೋಜನೆಗಳ ಅವಶ್ಯಕತೆ ಮತ್ತು ಅಗತ್ಯತೆಗಳ ಬಗ್ಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜ್ ,ಪರಿಸರ ಸ್ನೇಹಿ ಕೈಗಾರಿಕಾ ವಲಯ,ನಾಡ ದೋಣಿ ಮೀನುಗಾರರ ದೋಣಿಗಳು ತಂಗುದಾಣಕ್ಕೆಅಗತ್ಯ ಕಿರು ಬಂದರಿನ ನಿರ್ಮಾಣ, ಮೀನುಗಾರರ ಆದಾಯ ಹೆಚ್ಚಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ನೆರವು ನೀಡುವ ಮತ್ಸಸಿರಿ ಯೋಜನೆ,ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ,ಗೃಹಿಣಿ ಶಕ್ತಿ ಯೋಜನೆ, ಕರಾವಳಿಗೆ ವಿಶೇಷ ಅನುದಾನ ನೀಡಿ ಪ್ರವಾಸೋದ್ಯಮ ಬೆಳೆಸಿ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ, ಉಡುಪಿ ಜಿಲ್ಲೆಗೊಂದು ಮೀನುಗಾರಿಕಾ ಕಾಲೇಜು ಮತ್ತು ಪ್ರತ್ಯೇಕ ಹಾಲು ಡೈರಿ ಘಟಕ, ಯುವ ಉದ್ಯಮಿಗಳಿಗೆ ಬೆಂಬಲ,ಸಮುದ್ರ ಪ್ರಯಾಣ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ವಾಟರ್ ಮೆಟ್ರೋ ನಿರ್ಮಾಣ,ಸರಕಾದ ಅಧೀನದಲ್ಲಿರುವ ದ್ವೀಪಗಳನ್ನು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿ, ಉಡಾನ್ ಯೋಜನೆಯಡಿ ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣ,ಪ್ರತೀ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ದ್ವಿಪಥ ಸಂಪರ್ಕ ರಸ್ತೆ,ಧಾರ್ಮಿಕ ಕ್ಷೇತ್ರಗಳ ಮತ್ತು ಬೀಚ್ ಸಂಪರ್ಕಕ್ಕೆ ಕಾರಿಡಾರ್ ಅಭಿವೃದ್ದಿಗೊಳಿಸುವುದು ನಮ್ಮ ಪ್ರಣಾಳಿಕೆಯ ಪ್ರಮುಖ ಅಂಶಗಳು" ಎಂದರು.
ಸಭೆಯಲ್ಲಿ ಮಾಜಿ ವಿಧಾನ ಪರಿಷತ್ತಿನ ಸದಸ್ಯೆ ತಾರ, ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.