ಮಂಗಳೂರು,ಮಾ 26(MSP): ತಮಿಳುನಾಡಿಗೆ ತೆರಳಿ ಮೀನು ವ್ಯಾಪಾರಕ್ಕೆ ಸಂಬಂಧಿಸಿದ ಹಣ ಪಡೆದು ಮಾ.೨೫ರ ಸೋಮವಾರ ನಸುಕಿನಲ್ಲಿ ನಗರಕ್ಕೆ ರೈಲಿನಲ್ಲಿ ವಾಪಾಸಾಗಿ ದೇರಳಕಟ್ಟೆಯ ನಿವಾಸಿಯೊಬ್ಬರು ಸ್ಕೂಟರ್ನಲ್ಲಿ ಇರಿಸಿಕೊಂಡಿದ್ದ 7 ರೂ. ಲಕ್ಷ ನಗದು ಇದ್ದ ಚೀಲವನ್ನು ದುಷ್ಕರ್ಮಿಗಳಿಬ್ಬರು ಕಳವು ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.
ದೇರಳಕಟ್ಟೆಯ ಹಮೀದ್ ಹಣ ಕಳೆದುಕೊಂಡವರು. ಮೀನು ವ್ಯಾಪಾರಸ್ಥರಾಗಿರುವ ಇವರು, ತಮಿಳುನಾಡಿನ ಉದ್ಯಮಿಗಳಿಗೆ ಪೂರೈಸಿದ್ದ ಮೀನಿನ ಬಾಬ್ತು ಹಣ ಪಡೆಯಲು ಶನಿವಾರ ರಾತ್ರಿ ರೈಲಿನಲ್ಲಿ ಹೋಗಿದ್ದರು. ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸ್ಕೂಟರ್ ನಿಲ್ಲಿಸಿ ಅವರು ತೆರಳಿದ್ದರು. ಅಲ್ಲಿ 7 ರೂ. ಲಕ್ಷ ನಗದು ಪಡೆದುಕೊಂಡು ಭಾನುವಾರ ರಾತ್ರಿ ವಾಪಸು ಹೊರಟಿದ್ದರು.
ಸೋಮವಾರ ಬೆಳಿಗ್ಗೆ 5 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಹಮೀದ್, ಹಣದ ಚೀಲವನ್ನು ಸ್ಕೂಟರ್ನ ಎದುರು ಭಾಗದಲ್ಲಿ ಇರಿಸಿಕೊಂಡು ಮನೆಯತ್ತ ಹೊರಟಿದ್ದರು. 5.25ರ ಸುಮಾರಿಗೆ ವೆನ್ಲಾಕ್ ಆಸ್ಪತ್ರೆಯ ಬಳಿ ಬಂದಾಗ ಟೆಂಪೋ ಕ್ಯಾಂಟೀನ್ನಲ್ಲಿ ಚಹಾ ಕುಡಿಯಲು ಮುಂದಾದರು. ಹಣದ ಚೀಲವಿದ್ದ ಸ್ಕೂಟರ್ ನಿಲ್ಲಿಸಿ ಚಹಾ ಕುಡಿಯಲು ತೆರಳಿದರು. ಅಷ್ಟರಲ್ಲೇ ಬೈಕ್ನಲ್ಲಿ ಅವರನ್ನು ಹಿಂಬಾಲಿಸಿ ಬಂದ ಇಬ್ಬರು ಹಣವಿದ್ದ ಚೀಲವನ್ನು ಕಳವು ಮಾಡಿಕೊಂಡು ಫಳ್ನೀರ್ನತ್ತ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಮೀದ್ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.