ಉಡುಪಿ, ಏ 01 (DaijiworldNews/HR): ಪ್ರಧಾನಿ ಮೋದಿಯವರು ಮೇ 3ರಂದು ಮುಲ್ಕಿಗೆ ಆಗಮಿಸಲಿದ್ದು ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು 3 ಲಕ್ಷಕ್ಕೂ ಮಿಕ್ಕಿ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿಯ ಮಂಗಳೂರು ವಿಭಾಗದ ಪ್ರಭಾರಿ ಉದಯ್ ಕುಮಾರ್ ಶೆಟ್ಟಿಯವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಮಾದ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೇ 3ರಂದು ಮುಲ್ಕಿಗೆ ಬರಲಿದ್ದಾರೆ. ಮುಲ್ಕಿಯ ನಗರದ ಮದ್ಯಭಾಗದಲ್ಲಿ ವಿಶಾಲವಾದ 70 ಎಕ್ರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದೆ.ಈ ಬಾರಿಯ ಚುನಾವಣೆಯಲ್ಲಿ ಮೋದಿಯವರ ಕಾರ್ಯಕ್ರಮ 2 ಜಿಲ್ಲೆಯನ್ನು ಒಳಗೊಂಡಿದೆ.ಉಡುಪಿಯ 5 ವಿಧಾನ ಸಭಾ ಕ್ಷೇತ್ರ, ದಕ್ಷಿಣ ಕನ್ನಡದ 8 ವಿಧಾನ ಸಭಾ ಕ್ಷೇತ್ರಗಳಿಗೆ ಒಟ್ಟಾಗಿ ಈ ಕಾರ್ಯಕ್ರಮ ನಡೆಯಲಿದೆ. ಮೋದಿಯವರು ಸಾರ್ವಜನಿಕ ಕಾರ್ಯಕ್ರಮದಲ್ಲಿ 11 ಗಂಟೆಗೆ ಭಾಗವಹಿಸಲಿದ್ದಾರೆ. ಅಂದಾಜು 3 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ ಇದೆ.ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಿಂದ 20 ಸಾವಿರ ಜನರ ನಿರೀಕ್ಷೆ ಇದೆ.ಮುಲ್ಕಿ, ಕಾಪು ವಿಧಾನ ಸಭಾ ಕ್ಷೇತ್ರದ 30 ಸಾವಿರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ದಕ್ಷಿಣ , ಮಂಗಳೂರು ಉತ್ತರ,ಮಂಗಳೂರಿಂದ ಸುಮಾರು 25 ರಿಂದ 30 ಸಾವಿರ ಜನ ಬರುವ ನಿರೀಕ್ಷೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರಲ್ಲಿ ವಿಶೇಷ ಉತ್ಸಾಹ ಇದ್ದು ಉಭಯ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳಲ್ಲಿ ಈ ಬಾರಿ ಬೆಜೆಪಿ ಗೆಲ್ಲಲಿದೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯವರು ಮೇ 6ರಂದು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಉಭಯ ಜಿಲ್ಲೆಗಳಿಗೆ ಆಗಮಿಸಲಿದ್ದಾರೆ. ಅಂದು 12 ಗಂಟೆಗೆ ಪುತ್ತೂರಿಗೆ, 1.30ಗೆ ಬಂಟ್ವಾಳ ಮತ್ತು ,3 ಗಂಟೆಗೆ ಕಾರ್ಕಳಕ್ಕೆ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಪ್ರಮೋದ್ ಮದ್ವರಾಜ್ , ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ,ಜಿಲ್ಲಾ ಸಹ ವಕ್ತಾರ ಅಂಬಾಲಪಾಡಿ ಶಿವಕುಮಾರ್ ಉಪಸ್ಥಿತರಿದ್ದರು.