ಪುತ್ತೂರು, ಮಾ26(SS): ನಗರದ ಮುಖ್ಯ ರಸ್ತೆಯಲ್ಲಿ ಸುಮಾರು 50 ವರ್ಷಗಳಿಂದ ಕಾರ್ಯನಿರ್ವಹಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಅರುಣಾ ಟಾಕೀಸ್ ಮಾ. 15ರಿಂದ ಮುಚ್ಚಿದ್ದು. ಪುತ್ತೂರಿನಲ್ಲಿ ಒಂದೂ ಟಾಕೀಸ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಈ ತಿಂಗಳ ಮಾ.1ರಂದು ಅರುಣಾ ಟಾಕೀಸ್ನಲ್ಲಿ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಯಾಗಿತ್ತು. ಎರಡು ವಾರ ಓಡಿದ್ದ ಈ ಸಿನಿಮಾ ಮಾ.14ರಂದು ಕೊನೆಯ ಪ್ರದರ್ಶನ ನೀಡಿತ್ತು. ಮೊದಲಿಂತಾಗಿದ್ದರೆ ಮಾ.15ರಂದು ಮತ್ತೊಂದು ಹೊಸ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಮಾ.15ರಂದು ಥಿಯೇಟರ್ ಗೇಟ್ಗೆ ಬೀಗ ಹಾಕಲಾಗಿದೆ.
ಟಾಕೀಸ್ ನಿರ್ವಹಣೆಯನ್ನು ಲೀಸ್ ಆಧಾರದಲ್ಲಿ ನೀಡಿದ್ದೆ. ಅದು ಸಮಪರ್ಕಕವಾಗಿ ನಡೆಯದ ಕಾರಣ ಈಗ ಬಂದ್ ಮಾಡಿದ್ದೇನೆ. ಸದ್ಯಕ್ಕೆ ಥಿಯೇಟರ್ ಓಪನ್ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ತೆರೆಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ . ಸದ್ಯಕ್ಕೆ ಇದು ಮರು ಆರಂಭಗೊಳ್ಳುವ ಯಾವ ಸೂಚನೆಯೂ ಇಲ್ಲ ಎಂದು ಸಿನಿಮಾ ಟಾಕೀಸ್ ಮಾಲೀಕ ರಮಾನಂದ ನಾಯಕ್ ಉತ್ತರಿಸಿದ್ದಾರೆ.
ಸುಮಾರು 50 ವರ್ಷ ಹಿಂದೆ ಪುತ್ತೂರಿನಲ್ಲಿ ಆರಂಭಗೊಂಡ ಅರುಣಾ ಥಿಯೇಟರ್ ಸಾವಿರಾರು ಸಿನಿಮಾಗಳನ್ನು ಪ್ರೇಕ್ಷ ಕರಿಗೆ ತೋರಿಸಿದೆ. ಸುತ್ತಮುತ್ತ ಗ್ರಾಮಾಂತರ ಪ್ರದೇಶವನ್ನೇ ಹೊಂದಿರುವ ಪುತ್ತೂರಿನ ಪಾಲಿಗೆ ಅರುಣಾ ಥಿಯೇಟರ್ ಏಕೈಕ ಟಾಕೀಸ್ ಆಗಿ ಉಳಿದುಕೊಂಡಿತ್ತು. ಕಳೆದ 3 ತಿಂಗಳ ಅವಧಿಯಲ್ಲಿ ಕೋರಿ ರೊಟ್ಟಿ ಮತ್ತು ಕಂಬಳಬೆಟ್ಟು ಭಟ್ರೆನ ಮಗಳ್ ಎಂಬ ಎರಡು ತುಳು ಸಿನಿಮಾ ಇಲ್ಲಿ ತೆರೆ ಕಂಡಿತ್ತು. ಆದರೆ ಇದಿಗ ಪ್ರೇಕ್ಷಕರ ಪಾಲಿಗೆ ಇದ್ದ ಈ ಥಿಯೇಟರ್ ಇಲ್ಲವಾಗಿದೆ.
ಈ ಹಿಂದೆ 4 ಸಿನಿಮಾ ಟಾಕೀಸ್ ಹೊಂದಿದ್ದ ಪುತ್ತೂರು ನಗರದಲ್ಲಿ ಈಗ ಒಂದೇ ಒಂದು ಟಾಕೀಸ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲವೂ ಮುಚ್ಚಿ ಕೊನೆಯಲ್ಲಿ ಉಳಿದಿದ್ದ ಅರುಣಾ ಟಾಕೀಸ್ ಕೂಡ ಈಗ ಬೀಗ ಧರಿಸಿದ್ದು, ನಗರ ಮತ್ತು ಗ್ರಾಮಾಂತರ ಪ್ರದೇಶದ ಸಿನಿಮಾ ಅಭಿಮಾನಿಗಳಿಗೆ ನಿರಾಸೆಯಾಗಿದೆ.