ಕಾಪು, ಏ 30 (DaijiworldNews/HR): ವಸತಿ ರಹಿತರಿಗೆ ಮನೆ, ಕುಡಿಯುವ ನೀರಿಗೆ ಆದ್ಯತೆ, ಕಾಪು ಕ್ಷೇತ್ರ ವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಗೊಳಿಸುವುದು ನನ್ನ ಗುರಿ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ರಾಜೀವ ಭವನದಲ್ಲಿ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯ ಮುನ್ನೋಟ ನಮ್ಮ ಕನಸಿನ ಕಾಪು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಪು ಕ್ಷೇತ್ರದಲ್ಲಿ ನಿವೇಶನ ರಹಿತ ಬಡವರಿಗೆ 10 ಸಾವಿರ ನಿವೇಶನ ನೀಡುವ ಸಂಕಲ್ಪದ ಗುರಿಯನ್ನು ಹೊಂದಿದ್ದೇನೆ. ಪ್ರವಾಸೋದ್ಯಮ ಕ್ಕೆ ವಿಪುಲ ಅವಕಾಶವಿರುವ ಕಾಪು ಕ್ಷೇತ್ರದಲ್ಲಿ ಟೂರಿಸಂ ಪಾರ್ಕ್ ನಿರ್ಮಾಣದ ಯೋಜನೆಯ ಜೊತೆಗೆ ಕಾಪು ಲೈಟ್ ಹೌಸ್ ನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಕ್ಕೆ ಮಾದರಿಯಾಗಿ ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಕ್ಕೆ ಹೊಸ ರೂಪ ನೀಡುವುದರ ಜೊತೆಗೆ ಕಾಪುವನ್ನು ಟೆಂಪಲ್ ಸಿಟಿಯನ್ನಾಗಿ ಮಾಡುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಹೆಜಮಾಡಿ ಶಾಂಭವಿ ನದಿ, ಕುರ್ಕಾಲುವಿನ ಪಾಪನಾಶಿನಿ, ಬೈರಂಪಳ್ಳಿ ಸ್ವರ್ಣನದಿಯಿಂದ ನೀರನ್ನೆತ್ತಿ ಶುಧ್ಧಿಕರಣಗೊಳಿಸಿ ಮನೆ ಮನೆಗೆ ನೀರನ್ನು ಒದಗಿಸುವ ಆದ್ಯತೆ ಯ ಯೋಜನೆಯನ್ನು ರೂಪಿಸುವ ಕಾರ್ಯಕ್ರಮ ಹಮ್ಮಿಕೊಳ್ಖಲಾಗಿದೆ. ಕಾಪು ಕ್ಷೇತ್ರದಲ್ಲಿ ಕಸವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು ವಿರೋಧ ಪಕ್ಷದ ತೀವ್ರ ವಿರೋಧದ ನಡುವೆಯೂ ಎಲ್ಲೂರಿನಲ್ಲಿ ಸ್ಥಾಪಿಸಿರುವ ಕಸ ವಿಲೇವಾರಿ ಘಟಕದ ಮೂಲಕ ಕಾಪುವಿನ ಸ್ವಚ್ಛ ಸಂಕಲ್ಪ ಯೋಜನೆ ಸಾಕಾರಗೊಳ್ಳುತ್ತಿದೆ ಎಂದರು.
ಕಾಪು ಕ್ಷೇತ್ರದ ಮೀನುಗಾರರ ಡೀಸೆಲ್, ಸೀಮೆ ಎಣ್ಣೆ ಸಬ್ಸಿಡಿ ಹೆಚ್ಚಿಸುವುದರೊಂದಿಗೆ ಕಡಲು ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ, ಮತ್ಸ್ಯಾಶ್ರಯ ಯೋಜನೆಗೆ ಚಾಲನೆ, ಹೆಜಮಾಡಿ ಬಂದರಿಗೆ ಕಾಯಕಲ್ಪ, ಕ್ಷೇತ್ರದಾದ್ಯಂತ ಹೈಟೆಕ್ ಮೀನು ಮಾರುಕಟ್ಟೆಗಳ ನಿರ್ಮಾಣ, ಎರ್ಮಾಳುವಿನಲ್ಲಿ ಜಟ್ಟಿ ನಿರ್ಮಾಣ, ಮತ್ಸ್ಯೋದ್ಯಮದೊಂದಿಗೆ ಪ್ರವಾಸೋದ್ಯಮ ಉತ್ತೇಜನ ನೀಡಲಾಗುವುದು.ಧಾರ್ಮಿಕ ಕ್ಷೇತ್ರದಲ್ಲಿ ವಿವಿಧ ಧರ್ಮದ ಧಾರ್ಮಿಕ ಕೇಂದ್ರಗಳಾದ ಮಂದಿರ, ಮಸೀದಿ, ಚರ್ಚ್ಗಳ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಉತ್ತೇಜನ ನೀಡಲಾಗುವುದು ಎಂದು ಸೊರಕೆ ಹೇಳಿದರು.
ಕಾಪು ಕ್ಷೇತ್ರದಲ್ಲಿ, ದಲಿತ-ಸಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅಭಿವೃದ್ಧಿಗೆ ಹಲವಾರು ಯೋಜನೆಗಳೊಂದಿಗೆ ದಲಿತ ಕಾಲೋನಿಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾ, ಮೊರಾರ್ಜಿ ಶಾಲೆಗಳ ನಿರ್ಮಾಣ ನನ್ನ ಆಶಯವಾಗಿದೆ ಎಂದರು.
ಯುವಕರಿಗೆ ಉದ್ಯೋಗ ಉದ್ದಿಮೆ,ಬಹುಮಹಡಿ ವಸತಿ ಯೋಜನೆ, ಕ್ರೀಡಾಂಗಣ ನಿರ್ಮಾಣ, ಕಾಪು ಪುರಸಭಾ ವ್ಯಾಪ್ತಿಯಲ್ಲಿ 100 ಬೆಡ್ಡಿನ ಸುಸಜ್ಕಿತ ಆಸ್ಪತ್ರೆ ನಿರ್ಮಾಣ , ರೈತ ಸಂಜೀವಿನಿ ಯೋಜನೆ,ಮತ್ಸ್ಯಾಶ್ರಯ ಯೋಜನೆ, ದಲಿತರ ಶ್ರೇಯೋಭಿವ್ರದ್ಧಿ ಯೋಜನೆ, ಗ್ರಾಮದ ವ್ಯಾಪ್ತಿಯಲ್ಲಿ ಸಿ ಆರ್ ಝಡ್ ನಿಯಮ ಸಡಿಲಿಕೆ , ಸುಸಜ್ಜಿತ ಬಸ್ಸು ನಿಲ್ದಾಣ ದ ನಿರ್ಮಾಣ ಯೋಜನೆಯನ್ನು
ಸಾಕಾರ ಗೊಳಿಸಲು, ಪಾರದರ್ಶಕ ಆಡಳಿತ ನಡೆಸಲು ಕಾಪು ಕ್ಷೇತ್ರ ಮತದಾರರು ಆಶೀರ್ವಾದ ಮಾಡಬೇಕಾಗಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನವೀನ್ಚಂದ್ರ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಶಾಂತ್ ಜತ್ತನ್ನ, ಶರ್ಪುದ್ದೀನ್ ಶೇಖ್, ಅಮೀರ್ ಕಾಪು, ದೇವರಾಜ್ ಕೋಟ್ಯಾನ್, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.