ಮಂಗಳೂರು, ಏ 30 (DaijiworldNews/HR): ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲು ಶ್ರಮಿಸಿದ ಮಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜೆ.ಆರ್.ಲೋಬೊ ಅವರನ್ನು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್ ಶ್ಲಾಘಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಶಾಂತಿ, ಸೌಹಾರ್ದಯುತ ಬದುಕನ್ನು ನಿರೀಕ್ಷಿಸುತ್ತಿದ್ದು, ಕಾಂಗ್ರೆಸ್ಗೆ ಮತ ನೀಡಿ ಅಧಿಕಾರಕ್ಕೆ ತರುತ್ತಾರೆ ಎಂದರು.
ಮಂಗಳೂರು ನಗರವು ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದರೂ, ಶೈಕ್ಷಣಿಕ ಕೇಂದ್ರವಾಗಿದ್ದರೂ ಕೂಡ ಯುವಕರಿಗೆ ಉದ್ಯೋಗವಿಲ್ಲ. ಯುವಕರು ಏಕೆ ನಿರುದ್ಯೋಗಿಗಳಾಗಿದ್ದಾರೆ ಎಂಬುದನ್ನು ಜನರು ಯೋಚಿಸಬೇಕು ಎಂದರು.
ಇನ್ನು ಬಿಜೆಪಿ ಸರ್ಕಾರ ಜನರ ಭಾವನೆಗಳ ಮೇಲೆ ಆಟವಾಡಿ ಅಧಿಕಾರಕ್ಕೆ ಬಂದಿದ್ದು, ಧ್ರುವೀಕರಣ ರಾಜಕಾರಣದ ಮೂಲಕ ದೇಶವನ್ನು ಒಡೆಯುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮೂರು ವರ್ಷ ಬಿಜೆಪಿ ಆಡಳಿತ ನಡೆಸಿದರೂ ನಗರದಲ್ಲಿ ಶೌಚಾಲಯಗಳಿಲ್ಲ, ಅಭಿವೃದ್ಧಿ ಮಾತ್ರ ಆಗಿಲ್ಲ, ಭ್ರಷ್ಟಾಚಾರ ಮಾತ್ರ ನಡೆದಿದೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಸೇಸಮ್ಮ, ಪ್ರಕಾಶ್ ಸಾಲಿಯಾನ್, ಟಿ ಕೆ ಸುಧೀರ್, ಮತ್ತಿತರರು ಉಪಸ್ಥಿತರಿದ್ದರು.