ಬಂಟ್ವಾಳ, ಏ 30 (DaijiworldNews/HR): ಚುನಾವಣೆ ಪಾರದರ್ಶಕವಾಗಿ, ನಿರ್ಭೀತಿಯಿಂದ ನಡೆದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಸಾಕಾರಗೊಳ್ಳುತ್ತದೆ ಎಂದು ದ.ಕ.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಬಂಟ್ವಾಳ ತಾಲೂಕು ಪಂಚಾಯತ್ ಬಂಟ್ವಾಳ, ತಾಲೂಕು ಕಚೇರಿ ಬಂಟ್ವಾಳ, ಪುರಸಭೆ ಬಂಟ್ವಾಳ ಹಾಗೂ ಕಾರ್ಮೆಲ್ ಕಾಲೇಜು ಮೊಡಂಕಾಪು ಇವರ ಸಹಯೋಗದೊಂದಿಗೆ ಬಿ.ಸಿ.ರೋಡಿನಲ್ಲಿ ನಡೆದ ಮತದಾರರ ಜಾಗೃತಿಯ ಬೃಹತ್ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18 ವರ್ಷಕ್ಕಿಂತ ಮೇಲ್ಪಟ್ಟ ಯಾರೂ ಕೂಡ ಮತದಾನದ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಗದ ನಿರ್ದೇಶನದಂತೆ ನಡೆಸಲಾಗುತ್ತಿದೆ ಎಂದರು.
ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಆರಂಭಗೊಂಡ ಜಾಥಾ ಬಿ.ಸಿ.ರೋಡು ಸರ್ವೀಸ್ ಬಸ್ ನಿಲ್ದಾಣದವರೆಗೂ ನಡೆಯಿತು.
ಯಕ್ಷಗಾನ ವೇಷಧಾರಿಗಳು, ಬ್ಯಾಂಡ್, ಬೀದಿನಾಟಕ ಗಮನಸೆಳೆಯಿತು. ಬಂಟ್ವಾಳ ಚುನಾವಣಾಧಿಕಾರಿ ಅಬಿದ್ ಗದ್ಯಾಲ್, ತಹಶೀಲ್ದಾರ್ ದಯಾನಂದ್, ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಿಇಓ ಜ್ಞಾನೇಶ್, ಸಿಡಿಪಿಓ ಗಾಯತ್ರಿ ಕಂಬಳಿ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸ್ವೀಪ್ ಸಮಿತಿಯ ಡೊಂಬಯ್ಯ ಇಡ್ಕಿದು, ಮೊಡಂಕಾಪು ಕಾರ್ಮೆಲ್ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.