ಬಂಟ್ವಾಳ, ಏ 29 (DaijiworldNews/HR): ಬಂಟ್ವಾಳದಲ್ಲಿ ಬಿಜೆಪಿ ಪರವಾದ ಅಲೆ ಇದ್ದು, ಕ್ಷೇತ್ರವನ್ನು ಬಂಟ್ವಾಳ 2.0ರ ಕಡೆಗೆ ಒಯ್ಯಲು ರಾಜೇಶ್ ನಾಯ್ಕ್ ಕನಸುಕಟ್ಟಿದ್ದಾರೆ, ಅದನ್ನು ಕಾರ್ಯಕರ್ತರು ಸಾಕಾರಗೊಳಿಸಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕರೆ ನೀಡಿದ್ದಾರೆ.
ಶನಿವಾರ ಬೆಳಿಗ್ಗೆ ಪುತ್ತೂರಿಗೆ ತೆರಳುವ ದಾರಿ ಮಧ್ಯೆ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು, ಬಿಜೆಪಿಯ ಅಭ್ಯರ್ಥಿ ರಾಜೇಶ್ ನಾಯ್ಕ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಕಾಂಗ್ರೆಸ್ ಪಕ್ಷದವರಿಗೆ ರಿವರ್ಸ್ ಗೇರ್ ಹಾಕುವ ಬಯಕೆ. ಅವರು ಬಂಟ್ವಾಳವನ್ನು 2017ರ ಅಂಚಿಗೆ ಕೊಂಡೊಯ್ಯಲು ಹೊರಟರೆ, ಬಿಜೆಪಿ ಮುಂದಿನದ್ದನ್ನು ಯೋಚಿಸುತ್ತಿದೆ ಎಂದರು.
ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿರುವ ಎಸ್ ಡಿ ಪಿಐ, ನಿಷೇಧಿತ ಪಿಎಫ್ಐ ನ ಬಿ ಟೀಮ್ ಎಂದು ಆರೋಪಿಸಿದ ಅವರು, ಕಾಂಗ್ರೇಸ್ ಇವರ ಜೊತೆ ಒಳ ಒಪ್ಪಂದದ ರಾಜಕೀಯ ನಡೆಸುತ್ತಿದೆ ಎಂದರು.
ಐದು ವರ್ಷದ ಹಿಂದೆ ಇದ್ದ ಸ್ಥಿತಿ ಮತ್ತೆ ಬರಬೇಕಾ ಎಂದು ಪ್ರಶ್ನಿಸದ ಅವರು, ಕಾರ್ಯಕರ್ತರು ಇಂತಹಾ ವಿಚಾರವನ್ನು ಮನೆಮನೆಯ ಚರ್ಚೆಯ ವಿಷಯವನ್ನಾಗಿಸಿ, ಮುಂದಿನ ಹತ್ತುದಿನಗಳಲ್ಲಿ ಇದ್ದ ಎಲ್ಲಾ ಶಕ್ತಿಸಾಮರ್ಥ್ಯ ಬಳಸಿ ಪ್ರಚಾರ ನಡೆಸುವಂತೆ ತಿಳಿಸಿದರು.
ರಾಜೇಶ್ ನಾಯ್ಕ್ ಅವರ ಮೂಲಕ ಬಂಟ್ವಾಳದಲ್ಲಿ ಕಾನೂನು ಸುವ್ಯವಸ್ಥೆಯ ಜತೆ ನಡೆದಿರುವ ಅಭಿವೃದ್ಧಿಯನ್ನು ಮತವಾಗಿ ಪರಿವರ್ತಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ರಾಷ್ಟ್ರ ನಾಯಕರಾದ ಮೋದಿ, ಅಮಿತ್ ಷಾ, ನಡ್ಡಾ ಹೀಗೆ ಎಲ್ಲಾ ನಾಯಕರು ತಮ್ಮ ಸಮಯವನ್ನು ಕರ್ನಾಟಕಕ್ಕೆ ಮೀಸಲಿಟ್ಟಿದ್ದು, ಕಾರ್ಯಕರ್ತರು ಪೂರ್ಣ ಪ್ರಮಾಣದ ಶ್ರಮದೊಂದಿಗೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಮಾತನಾಡಿ, ಕಾರ್ಯಕರ್ತರಿಗೆ ಅಣ್ಣಾಮಲೈ ಶಕ್ತಿ ತುಂಬಿದ್ದು, ಬಿಜೆಪಿ ಗೆದ್ದೇ ಗೆಲ್ಲುತ್ತದೆ. ವಿಜಯೋತ್ಸವದ ಸಂದರ್ಭ ಅಣ್ಣಾಮಲೈ ಮತ್ತೆ ಭಾಗವಹಿಸಲಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮುಖಂಡರಾದ ದೇವಪ್ಪ ಪೂಜಾರಿ, ಆರ್.ಸಿ.ನಾರಾಯಣ, ಸುಲೋಚನಾ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.