ಮಂಗಳೂರು, ಏ.29 (DaijiworldNews/KK): ಭೂಗೋಳದ ದಕ್ಷಿಣ ಭಾಗದಲ್ಲಿ ಕಾಣಸಿಗುವ ಸೂಟಿ ಶಿಯರ್ ವಾಟರ್ ಪಕ್ಷಿಯು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕರಾವಳಿ ಭಾಗದ ಸಮುದ್ರದಲ್ಲಿ ಕಾಣಿಸಿಕೊಂಡಿದೆ.
ಸಮುದ್ರದ ಪಕ್ಷಿಗಳನ್ನು ವೀಕ್ಷಿಸಿ ದಾಖಲು ಮಾಡುವ ಕರಾವಳಿ ಬರ್ಡ್ ವಾಚರ್ ನೆಟ್ ವರ್ಕ್ ಇದೇ ಮೊದಲ ಬಾರಿಗೆ ಭಾರತಲ್ಲಿ ಸೂಟಿಶಿಯರ್ ವಾಟರ್ ಎಂಬ ಅಪರೂಪದ ಪಕ್ಷಿಯನ್ನ ಪತ್ತೆ ಮಾಡಿದ್ದು, ಈ ತಂಡದ ಸದಸ್ಯರು ಪ್ರತಿ ವರ್ಷವು ಸಮುದ್ರ ಪಕ್ಷಿಗಳ ಸಮೀಕ್ಷೆ ನಡೆಸುತ್ತಾರೆ.
ಮೀನುಗಾರಿಕ ಬೋಟ್ ನಲ್ಲಿ ತೆರಳಿ ಪಕ್ಷಿಗಳ ದಾಖಲೀಕರಣ ಮಾಡುವ ಈ ತಂಡ ಎಪ್ರಿಲ್ 22 , 23ರಂದು ಎರಡು ದಿವಸ ಸಮುದ್ರದಲ್ಲಿ ಹೋಗಿ ದಾಖಲೀಕರಣಕ್ಕೆ ಮುಂದಾಗಿದ್ದರು. ಈ ವೇಳೆ ಸೂಟಿ ಶಿಯರ್ ವಾಟರ್ ಪತ್ತೆಯಾಗಿತ್ತು. ಆದರೆ ಮೊದಲಿಗೆ ಇದು ಯಾವ ಪಕ್ಷಿಯೆಂಬ ಮಾಹಿತಿ ಇರಲಿಲ್ಲ. ಸಮುದ್ರ ಯಾನದ ಬಳಿಕ ಇದರ ಗುರುತಿಸುವಿಕೆಯಲ್ಲಿ ತಂಡ ಯಶಸ್ವಿಯಾಗಿದೆ.
ಈ ಪಕ್ಷಿಯು ಅಮೇರಿಕಾ, ಒಮಾನ್, ಶ್ರೀಲಂಕಾದಲ್ಲಿ ಕಂಡು ಬಂದಿತ್ತು. ಆದರೆ ಭಾರತದಲ್ಲಿ ಇದು ಮೊದಲ ಭಾರಿಗೆ ಪತ್ತೆಯಾಗಿದೆ.
ಚಳಿಗಾಲದಲ್ಲಿ ಈ ಪಕ್ಷಿಯು ಅಮೇರಿಕಾ ಕಡೆಗೆ ವಲಸೆ ಹೋಗುತ್ತದೆ ಎಂದು ತಂಡದ ಸದಸ್ಯರು ಮಾಹಿತಿ ನೀಡಿದ್ದಾರೆ. ಸಮಾನ್ಯವಾಗಿ ಪಾರಿವಾಳದ ಗಾತ್ರದಲ್ಲಿ ಕಂಡು ಬರುವ ಈ ಹಕ್ಕಿಯು ಉದ್ದ ರೆಕ್ಕೆಗಳನ್ನು ಒಳಗೊಂಡಿದೆ. ಸೂಟಿ ಮಾತ್ರವಲ್ಲದೆ ಪೊಮರೈನ್ ಸ್ಕೂವ, ಕಾಮನ್ ಟರ್ನ್, ವೈಟ್ ಚೀಕ್ಡ್ ಟರ್ನ್, ಪರ್ಶಿಯನ್ ಶಿಯರ್ ವಾಟರ್, ಫ್ಲೆಶ್ ಫೊಟೆಡ್ ಶಿಯರ್ ವಾಟರ್ ನಂತಹ ಹಕ್ಕಿಗಳು ಕೂಡ ಸಮೀಕ್ಷೆ ವೇಳೆ ಕಂಡುಬಂದಿದ್ದವು.