ಕುಂದಾಪುರ, ಏ 29 (DaijiworldNews/HR): ಕೇಂದ್ರ ರಾಜ್ಯ ಸರ್ಕಾರಗಳ ಅಭಿವೃದ್ದಿ ಅಲೆಯಲ್ಲಿ ಕಾಂಗ್ರೆಸ್ ಅಲೆ ಕೊಚ್ಚಿಕೊಂಡು ಹೋಗಿದೆ. ವಾರೆಂಟಿಯೇ ಇಲ್ಲದ ಗ್ಯಾರಂಟಿ ಕಾರ್ಡ್ ಮಾತ್ರ ಅವರ ಬದುಕು. ಹತ್ತು ವರ್ಷಗಳ ಕೇಂದ್ರ-ರಾಜ್ಯದಲ್ಲಿ ಅವರದ್ದೇ ಇದ್ದರೂ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಇವತ್ತು ಜಾತಿಜಾತಿಗಳ ನಡುವೆ ಕಂದಕ ಸೃಷ್ಟಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕುಂದಾಪುರದ ಸಂಗಮ್ ಹತ್ತಿರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2013ರಲ್ಲಿ ಸಿದ್ಧರಾಮಯ್ಯನವರಿಗೆ ರಾಜ್ಯದ ಜನತೆ ಅವಕಾಶ ನೀಡಿತು. ಅವರು ಟಿಪ್ಪು ಜಯಂತಿ, ಶಾದಿ ಭಾಗ್ಯ ತಂದರು. ಸಮಾಜ ಸಮಾಜವನ್ನು, ಧರ್ಮಧರ್ಮವನ್ನು ಒಡೆಯುವ ಕೆಲಸ ಮಾಡಿದರು. ಇವತ್ತೂ ಅವರು ಅಭಿವೃದ್ಧಿಯ ಬಗ್ಗೆ ಹೇಳುತ್ತಿಲ್ಲ. ಟಿಪ್ಪು ಯೂನಿವರ್ಸಿಟಿ ಮಾಡುತ್ತೇವೆ, ಮುಸಲ್ಮಾನ ಬಾಂಧವರಿಗೆ 10 ಸಾವಿರ ರೂ ಕೊಡುತ್ತೇವೆ ಎನ್ನುವಂತಹ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಎಂದರು.
ಇನ್ನು ಭಾರತೀಯ ಜನತಾ ಪಕ್ಷ ಎಂದರೆ ಅಭಿವೃದ್ದಿ. ಪೊಳ್ಳು ಭಾಷಣಗಳಿಗೆ ಜನ ಮರುಳಾಗುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಐದು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ಗೆಲುವು ಸಾಧಿಸಿದ ರೀತಿಯಲ್ಲಿಯೇ ಕಿರಣ್ ಕೊಡ್ಗಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.