ಕಡಬ, ಮಾ 25(SM): ನದಿ ತೀರಕ್ಕೆ ತೆರಳಿದ ಯುವತಿಯೋರ್ವಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ನಡೆದಿದೆ. ಮೃತ ಯುವತಿಯನ್ನು ಸಕಲೇಶಪುರ ತಾಲೂಕಿನ ಬಾಳೆಗೇರಿ ನಿವಾಸಿ ಕುಮಾರ - ಹೊನ್ನಮ್ಮ ದಂಪತಿಯ ಪುತ್ರಿ ದಿವ್ಯಾ(19) ಎಂದು ಗುರುತಿಸಲಾಗಿದೆ.
ಈಕೆಗೆ ಮದುವೆ ನಿಶ್ಚಿತಾರ್ಥವಾಗಿದ್ದು, ಈ ಹಿನ್ನೆಲೆಯಲ್ಲಿ ಅತಿಥಿ ಸತ್ಕಾರಕ್ಕಾಗಿ ಕೊಯಿಲ ಗ್ರಾಮದ ವಳಕಡಮದಲ್ಲಿರುವ ತನ್ನ ದೊಡ್ಡಮ್ಮನ ಮನೆಗೆ ಆಗಮಿಸಿದ್ದಳು. ಸೋಮವಾರ ಸಂಜೆ ಮನೆ ಸಮೀಪದ ನದಿಯಲ್ಲಿ ಸ್ನಾನಕ್ಕೆಂದು ತೆರಳಿ ಹಿಂದಿರುಗಿದ್ದು, ಆ ಬಳಿಕ ಕೈಕಾಲು ತೊಳೆಯಲೆಂದು ನದಿ ತೀರಕ್ಕೆ ತೆರಳಿದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.