ಮಂಗಳೂರು, ಏ 28 (DaijiworldNews/SM): ಏಪ್ರಿಲ್ ಮೇ ತಿಂಗಳು ಬಂತೆಂದರೆ ಸಾಕು ತಾಪಮಾನ ಗರಿಷ್ಟಮಟ್ಟಕ್ಕೆ ತಲುಪುತ್ತದೆ. ನೀರಿನ ಸಮಸ್ಯೆ ತಲೆದೋರುತ್ತದೆ. ಪ್ರಕೃತಿಯಲ್ಲಿದ ಹಸಿರು ಮಾಯವಾಗುತ್ತದೆ. ಬೇಸಿಗೆಯ ಕಡೆಯ ತಿಂಗಳುಗಳೆರಡರಲ್ಲಿ ನೀರಿನ ಹಾಹಾಕಾರ ಸರ್ವೇ ಸಾಮಾನ್ಯ. ಏಪ್ರಿಲ್ ಮೇ ತಿಂಗಳಲ್ಲಿ ಮಳೆಯಾಗದಿದ್ದಲ್ಲಿ ಜನರ ಪಾಡು ಹೇಳ ತೀರದು. ಕುಡಿಯೋದಕ್ಕೂ ನೀರಿಲ್ಲದೆ ಜನ ಪರಿತಪಿಸುವುದುಂಟು. ಕೃಷಿ ಚಟುವಟಿಕೆಗೆ ಬರ ಬಡಿಯುವ ಅನುಭವ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲೇ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಕಾಡಿರಲಿಲ್ಲ. ಆದರೆ, ಈ ವರ್ಷ ಇಲ್ಲಿಯ ತನಕ ರೈತಾಪಿ ವರ್ಗ ನಿರೀಕ್ಷಿಸಿದ ಮಳೆ ಸುರಿದಿಲ್ಲ. ಇದು ಬೇಸಿಗೆಯನ್ನು ಎದುರಿಸಲು ಸವಾಲಿನದ್ದಾಗಿದೆ.
ಇತ್ತ ನದಿ ತೊರೆ ಹಳ್ಳಗಳು ಬತ್ತಿ ಹೋಗಿವೆ. ಕರಾವಳಿಯ ಜೀವ ನದಿ ನೇತ್ರಾವತಿಯೂ ಕೂಡ ಬತ್ತಿ ಬರುಡಾಗುತ್ತಿದ್ದು, ವರುಣಾಗಮನಕ್ಕಾಗಿ ಬಾಯ್ದೆರೆದು ನಿಂತಿದೆ. ನದಿಮೂಲಗಳು ಖಾಲಿಯಾಗುವುದು ಸಾಮಾನ್ಯವಾದರೆ, ಇತ್ತ ಕೆರೆ ಬಾವಿಗಳ ಒರತೆಯೂ ಮಾಸಿ ಮರೆಯಾಗಿವೆ. ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಅವಲಂಬಿಸಿರುವ ಕೊಳವೆ ಬಾವಿಗಳು ಕೂಡ ಜಲ ಮಟ್ಟವನ್ನು ಇಳಿಸಿವೆ. ಅಗೆದಷ್ಟು ಅಳವೇ ಹೊರತು, ಅನೇಕ ಕೊಳವೆ ಬಾವಿಗಳಲ್ಲಿ ಹನಿ ನೀರೂ ಸಿಗದಿರುವುದು ಅತಂಕಕಾರಿ ವಿಚಾರ. ಈ ಹಿಂದೆ ೨೦೦-೩೦೦ ಫೀಟ್ ಆಳದಲ್ಲಿ ದೊರೆಯುತ್ತಿದ್ದ ನೀರಿನ ಒರತೆ ಇದೀಗ ಸಾವಿರ ದಾಟಿದರೂ ಸಿಗದಿರುವುದು ಆಘಾತಕಾರಿ ಸಂಗತಿ. ಈ ಪರಿಸ್ಥಿತಿ ಮುಂದುವರೆದಲ್ಲಿ ಮುಂದೇನು ಎನ್ನುವ ಆತಂಕ ರೈತಾಪಿ ವರ್ಗದಲ್ಲಿ ಕಾಡುತ್ತಿದೆ. ಅಂತರ್ಜಲದ ಮಟ್ಟ ಆಳಕ್ಕೆ ಹೋದಷ್ಟು ನೀರು ವಿಷಪೂರಿತವಾಗಿರುತ್ತದೆ. ಇಂತಹ ನೀರು ಬಳಸುವುದೇ ಅಪಾಯಕಾರಿಯಾಗಿದೆ.
ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದ್ದು, ಅನೇಕ ಕೊಳವೆ ಬಾವಿಗಳು ಬರಿದಾಗುತ್ತಿರುವುದು ಭವಿಷ್ಯವನ್ನು ಸವಾಲಾಗಿಸಿದೆ. ಜನವರಿ ತಿಂಗಳಿನಿಂದೀಚೆಗೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ೫೦, ಬೆಳ್ತಂಗಡಿ ೧೫೧, ಪುತ್ತೂಋ ತಾಲೂಕಿನಲ್ಲಿ ೮೩, ಮಂಗಳೂರಿನಲ್ಲಿ ೪೫ ಹಾಗೂ ಸುಳ್ಯದಲ್ಲಿ ೮ ಒಳಗೊಂಡಂತೆ ಒಟ್ಟು ೩೩೭ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ ೬೯ ಕೊಳವೆ ಬಾವಿಗಳಲ್ಲಿ ಹನಿ ನೀರು ಸಿಗದಿರುವುದು ಹೊಲದೊಡೆಯನನ್ನು ತಲೆ ಮೇಲೆ ಕೈಇಟ್ಟು ಕೂರುವಂತೆ ಮಾಡಿದೆ.
ನೀರು ನೈಸರ್ಗಿಕವಾಗಿ ದೊರೆಯುವ ಸಂಪತ್ತಾದರೂ, ಬಳಕೆಗೆ ಯೋಗ್ಯವೆಣಿಸುವ ನೀರಿನ ಪ್ರಮಾಣ ಕಡಿಮೆ. ಅಗತ್ಯವನ್ನೂ ಮೀರಿ ನೀರಿನ ಹಿತಮಿತ ಬಳಕೆ ಅತೀ ಅಗತ್ಯವಾಗಿದೆ. ಕೃಷಿ ಸಮುದಾಯದ ಜನತೆ ಕೂಡ ಎಚ್ಚರಿಕೆ ವಹಿಸಬೇಕಾಗಿದೆ. ಸರಕಾರ ಕೃಷಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ದಿನವಿಡಿ ಬೋರ್ ವೆಲ್’ಗಳಿಂದ ನೀರು ಹಾಯಿಸುವ ಪದ್ಧತಿಗೆ ಕಡಿವಾಣ ಹಾಕಬೇಕು. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ನೀರಿನ ಪ್ರಮಾಣದ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಅಗತ್ಯ.ಈ ನಿಟ್ಟಿನಲ್ಲಿ ರೈತಾಪಿ ವರ್ಗ ಎಚ್ಚೆತ್ತುಕೊಳ್ಳಬೇಕಾಗಿದ್ದು, ಜನ ಸಾಮಾನ್ಯರು ನೀರನ್ನು ಮಿತವಾಗಿ ಬಳಸಬೇಕಾಗಿದೆ.