ಬಂಟ್ವಾಳ, ಏ 28 (DaijiworldNews/SM): ದೇಶದ ಭವಿಷ್ಯದ ದೃಷ್ಟಿಯಿಂದಲೂ ಕರ್ನಾಟಕದ ಚುನಾವಣೆಗೆ ಮಹತ್ವ ಇದೆ, ದೇಶವನ್ನು ಕಟ್ಟಿ ಬೆಳೆಸಿದ ಕಾಂಗ್ರೇಸ್ ಕರ್ನಾಟಕದಲ್ಲಿ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.
ಬಂಟ್ವಾಳ ಕಾಂಗ್ರೇಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಯವರ ಚುನಾವಣಾ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ರಹಿತವಾದ ಅಧಿಕಾರದ ಜೊತೆ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಹಾಗೂ ಚುನಾವಣಾ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ತಾಕತ್ತು ಕಾಂಗ್ರೇಸ್ ಗೆ ಇದೆ ಎಂದ ಅವರು, ಭಯದ ವಾತಾವರಣ ನಿರ್ಮಾಣ ಮಾಡಿ ಸಾಮರಸ್ಯದ ಬದುಕಿಗೆ ತೊಡಕು ಮಾಡಿದ ಹೆಗ್ಗಳಿಕೆ ಬಿಜೆಪಿಯದ್ದು,ಪ್ರತಿ ಚುನಾವಣಾ ಸಂದರ್ಭದಲ್ಲಿಯೂ ಭಾವನಾತ್ಮಕ ವಿಚಾರಗಳ ಮೂಲಕ ಜನರಿಂದ ಮತಪಡೆಯಲು ಪ್ರಯತ್ನ ಮಾಡುವ ಬಿಜೆಪಿಯ ಸಾಧನೆ ಶೂನ್ಯ ಎಂದು ಟೀಕಿಸಿದರು.
ಈ ಬಾರಿಯ ಕರ್ನಾಟಕದ ಚುನಾವಣೆ ದೇಶದ ದಿಕ್ಕನ್ನು ಬದಲು ಮಾಡುತ್ತದೆ ಎಂದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿರುವುದು ಸಮೀಕ್ಷೆಯ ಲ್ಲಿ ತಿಳಿದು ಬಂದ ವಿಚಾರವಾಗಿದ್ದು,ಜನರು ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳು, ಕುವೆಂಪು ಸಹಿತ ನಮ್ಮ ದೇಶದ ಅನೇಕ ಚಿಂತಕರ ಪಾಠವನ್ನು ತೆಗೆಯಲು ಹೊರಟಿದ್ದ ಬಿಜೆಪಿ ಚಿಂತನೆ ಸರಿಯಾ ಎಂದು ಪ್ರಶ್ನಿಸಿದ ಅವರು, ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮರುಳುಮಾಡಿದ್ದು , ಧರ್ಮ ಧರ್ಮ ನಡುವೆ ವಿಭಜನೆ ಮಾಡಿದ್ದು ಬಿಟ್ಟರೆ ಯಾವುದೇ ನೈಜ ಅಭಿವೃದ್ಧಿ ಮಾಡಿದ ಸಾಧನೆ ಬಿಜೆಪಿಯವರಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ 40 ಪರ್ಸೆಂಟ್ ಕಮೀಷನ್ ಮೂಲಕ ಭ್ರಷ್ಟಾಚಾರದಿಂದ ತತ್ತರಿಸಿಹೋಗಿದೆ. ಇದರಿಂದ ಹೊರಬಂದು ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡಿದೆ. ಅನುಭವಿ ಜನನಾಯಕ ರಮಾನಾಥ ರೈ ಅವರು ಬಂಟ್ವಾಳ ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ಈ ಅನೇಕ ನೂರಾರು ಕನಸುಗಳನ್ನು ಇಟ್ಟುಕೊಂಡು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಬಂಟ್ವಾಳದಿಂದ ರೈ ಅವರು ವಿಜಯ ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮುಖಂಡ ಬಿ.ಸಂಜೀವ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಫಲ್ಯ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಂತಿ ಪೂಜಾರಿ,
ಪ್ರಮುಖರಾದ ಸುಭಾಶ್ಚಂದ್ರ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ, ಉಮೇಶ್ ನಾವೂರು, ಜಾಸ್ನೀನ್, ರಿಯಾಜ್ ಬಂಟ್ವಾಳ , ತಿಮ್ಮಪ್ಪ ಕುಕ್ಕಿಪ್ಪಾಡಿ, ಜಗದೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.