ಕುಂದಾಪುರ, ಮಾ 25(SM): ಮರಳುಗಾರಿಕೆಗೆ ಅಧಿಕೃತವಾಗಿ ಅನುಮತಿಯಿಲ್ಲದೇ ಇದ್ದರೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಇಲಾಖಾಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ ಅಕ್ರಮ ಮರಳು ದಂಧೆಕೋರರು ರಂಗೋಲಿ ಕೆಳಗೆ ನುಸುಳಿರುವ ಪರಿಸ್ಥಿತಿ ನಡೆದಿದೆ.
ಮೀನು ಸಾಗಿಸುವ ಇನ್ಸುಲೇಟರ್ ಲಾರಿಯನ್ನು ಅಕ್ರಮ ಮರಳುಗಾರಿಕೆಗೆ ಬಳಸುತ್ತಿರುವ ಪ್ರಕರಣ ಮಾರ್ಚ್ 25ರ ಸೋಮವಾರ ಬೆಳಕಿಗೆ ಬಂದಿದೆ. ಮಂಗಳೂರು ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಕುಂದಾಪುರ ಪೊಲೀಸರು ಅಡ್ಡಗಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಮರಳು ಸಹಿತ ಇನ್ಸುಲೇಟರ್ ವಾಹನ ಹಾಗೂ ಒಂದು ಇನ್ನೋವಾ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಪಾವೂರಿನ ರಹಿಯಾನ್ ಮಂಜಿಲ್ ಜುಮ್ಮಾ ಮಸೀದಿ ಬಳಿಯ ನಿವಾಸಿ ಅಬ್ಬಾಸ್ ಎಂಬಾತನ ಪುತ್ರ ಅಬ್ದುಲ್ ಸತ್ತಾರ್(23), ಬ್ರಹ್ಮಾವರದ ವಾರಂಬಳ್ಳಿ ಗಾಂಧಿನಗರ ಸಮೀಪದ ಮಂಜುನಾಥ ದಮ್ಮೂರು(19) ಹಾಗೂ ಶ್ರೀಕಾಂತ (20), ಶರಣಪ್ಪ(19), ರಾಜೇಶ್ ಶೆಟ್ಟಿ (40), ಸುಕೇಶ್ ಕೋಟ್ಯಾನ್(34), ನೌಶಾದ್ ಆಲಿ ವಿವಿ(21) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ಬೀಜಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಮಂಗಳೂರು ಕಡೆಯಿಂದ ಭಟ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನ್ಸುಲೇಟರ್ ವಾಹನವನ್ನು ತಡೆದು ನಿಲ್ಲಿಸಿದಾಗ ಸ್ವಲ್ಪ ಮುಂದಕ್ಕೆ ಚಲಿಸಿದ ವಾಹನದಿಂದ ಆರೋಪಿಗಳು ಪರಾರಿಯಾಗಲೆತ್ನಿಸಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ಬಂದ ಇನ್ನೋವಾದಲ್ಲಿದ್ದವರನ್ನೂ ತಡೆದಾಗ ಅದರಲ್ಲಿದ್ದವರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೋವಾ ಕಾರು ಹಾಗೂ ಮರಳು ಸಹಿತ ಇನ್ಸುಲೇಟರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.