ಮಂಗಳೂರು, 28 (DaijiworldNews/HR): ಪಕ್ಕಲಡ್ಕ ಯುವಕ ಮಂಡಲದ ಅಮೃತ ಮಹೋತ್ಸವ ಅಂಗವಾಗಿ ಏಪ್ರಿಲ್ 29ರಂದು ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ ನಡೆಯಲಿದೆ.
1953ರಲ್ಲಿ ಬಜಾಲ್ ಸುತ್ತಮುತ್ತಲಿನ ಗ್ರಾಮದ ಅನಕ್ಷರಸ್ಥ ರೈತ, ಕೂಲಿ ಕಾರ್ಮಿಕರಿಗೆ ಅಕ್ಷರಭ್ಯಾಸ ನೀಡುವ ಒಂದು ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡ ಕೆಲವು ಯುವಕರು ರಾತ್ರಿ ಶಾಲೆಯನ್ನು ಪ್ರಾರಂಭ ಮಾಡುವ ಮೂಲಕ ಪಕ್ಕಲಡ್ಕ ಯುವಕ ಮಂಡಲ ಸಂಸ್ಥೆಯನ್ನು ಸ್ಥಾಪಿಸಿದರು.
ಇನ್ನು ಹೀಗೆ ಪ್ರಾರಂಭಗೊಂಡ ಪಕ್ಕಲಡ್ಕ ಯುವಕ ಮಂಡಲವು ಕಳೆದ 70 ವರುಷಗಳಿಂದ ಸ್ಥಳೀಯ ಯುವಜನರನ್ನು ಒಗ್ಗೂಡಿಸಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸದುದ್ದೇಶಗಳನ್ನಿಟ್ಟುಕೊಂಡು ನಿರಂತರ ಜನಪರ ಕೆಲಸವನ್ನು ಮಾಡುತ್ತ ಬಂದ ಕಾರಣಕ್ಕಾಗಿ ಇವತ್ತಿಗೂ ಊರಿನ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗಿದೆ.
ಈ ಬಾರಿ 70ನೇ ವರುಷದ ಅಮೃತಮಹೋತ್ಸವದ ನೆನಪಿನಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಕೈಗೊಳ್ಳುವ ಉದ್ದೇಶದಿಂದ ಸ್ಥಳೀಯ ಆರ್ಥಿಕವಾಗಿ ಹಿಂದುಳಿದ ಅಸಹಾಯಕ ರೋಗಿಗಳನ್ನು ಕೊಂಡೊಯ್ಯಲು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಮಹತ್ವಪೂರ್ಣ ಯೋಜನೆಯನ್ನು ಕೈಗೊಂಡಿದೆ.
ಏ. 29 ರಂದು ಪಕ್ಕಲಡ್ಕ ಯುವಕ ಮಂಡಲದ ಮೈದಾನದಲ್ಲಿ ಬಹಿರಂಗ ವಾರ್ಷಿಕೋತ್ಸವ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಇದೇ ವೇಳೆ ಪಿವೈಎಮ್ ಡಾನ್ಸ್ ತರಬೇತಿ ಕೇಂದ್ರ, ಯುವಕ ಮಂಡಲದ ಮಾಜಿ ನಾಯಕ ಕೊರಗಪ್ಪ ಕೊಟ್ಟಾರಿ ಸ್ಮರಣಾರ್ಥ ಗ್ರಂಥಾಲಯ ಉದ್ಘಾಟನೆಗೊಳ್ಳಲಿದೆ ಎಂದು ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್, ಕಾರ್ಯದರ್ಶಿ ಪ್ರೀತೇಶ್ ತಲವಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.