ಕಡಬ, ಏ 28 (DaijiworldNews/HR):ಕೊಂಬಾರಿನ ಕೆಂಜಾಳ ಬಗ್ಪುಣಿ ಭಾಗದ ಹೊಳೆಯ ನೀರಿನಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದ ಕಾಡಾನೆ ಮೃತಪಟ್ಟಿರುವ ಘಟನೆ ನಡೆದಿದೆ.
ಗುರುವಾರ ಈ ಕಾಡಾನೆ ಸಂಪೂರ್ಣವಾಗಿ ನಿತ್ರಾಣವಾದ ಸ್ಥಿತಿಯಲ್ಲಿ ಚೇರು ಎಂಬಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.ಅರಣ್ಯ ಅಧಿಕಾರಿಗಳು ಈ ಆನೆ ನೀರು ಸಹಾ ಕುಡಿಯುತ್ತಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದರು. ಅದರಂತೆ ಕಡಬದ ಪಶು ವೈದ್ಯಾಧಿಕಾರಿ ಡಾ| ಅಜಿತ್ ಹಾಗೂ ಹುಣಸೂರಿನಿಂದ ಅರಣ್ಯ ಇಲಾಖೆಯ ಪಶು ವೈದ್ಯ ಡಾ| ಮುಜೀಬ್ ಅವರನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಆನೆಯನ್ನು ಪರಿಶೀಲಿಸಿದ ಅವರು ಅದಕ್ಕೆ ಸುಮಾರು 50 ವರ್ಷ ಪ್ರಾಯವಾಗಿದ್ದು, ಬಾಯಿಯಲ್ಲಿ ಗಾಯವಾಗಿರುವಂತಿದೆ. ಈ ಕಾಡಾನೆ ವಯೋಸಹಜ ತೊಂದರೆಗಳಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದರು. ಈ ಆನೆಯ ಹಲ್ಲುಗಳು ಉದುರಿರುವುದು ಗಮನಕ್ಕೆ ಬಂದಿದೆ. ಈ ಕಾರಣದಿಂದಾಗಿ ಆನೆ ಆಹಾರ ಸೇವಿಸುವಾಗ ಜೀರ್ಣವಾಗದೇ ವಾಂತಿ ಮಾಡುತ್ತಿರಬಹುದು ಎನ್ನಲಾಗಿತ್ತು.
ಇನ್ನು ಆನೆ ಸಂಜೆಯ ವೇಳೆಗೆ ಕಷ್ಟುಪಟ್ಟು ಹೊಳೆಯಿಂದ ಮೇಲಕ್ಕೆ ಬಂದು ಅರಣ್ಯದೊಳಕ್ಕೆ ಹೋಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಬಗ್ಪುಣಿಯಲ್ಲಿ ಆನೆಯ ಮೃತ ಶರೀರ ಪತ್ತೆಯಾಗಿದೆ.