Karavali
ಕಾರ್ಕಳ: 'ರಾಜಕೀಯ ಶಪಥದಲ್ಲಿ ಸೋಲೆ ಇಲ್ಲ' - ಮಾಜಿ ಸಿಎಂ ವೀರಪ್ಪ ಮೊಯಿಲಿ
- Thu, Apr 27 2023 07:26:49 PM
-
ಕಾರ್ಕಳ, ಏ 27 (DaijiworldNews/HR): 1974ರಿಂದ ನಾನು ರಾಜಕೀಯವಾಗಿ ಕೈಗೊಂಡ ಶಪಥಗಳು ನೂರಕ್ಕೆ ನೂರು ಈಡೇರಿದೆ. ಎಲ್ಲಿಯೂ ಸೋಲುಕಂಡಿಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಕಾರ್ಕಳದಲ್ಲಿ ಕೈಗೊಂಡಿರುವ ಶಪಥವು ಪ್ರಸಕ್ತ ಸಾಲಿನ ವಿಧಾನಸಭೆಯ ಚುನಾವಣೆಯಲ್ಲಿ ಈಡೇರುವ ಮೂಲಕ ಕಾರ್ಕಳ ಮತ್ತೇ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಕಳ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಚುನಾವಣೆಯ ಅಂತಿಮದಲ್ಲಿ ಅಭ್ಯರ್ಥಿಯ ಆಯ್ಕೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಹೋರಾಟದ ನಡೆಯುತ್ತಿರುವುದು ಕಾಂಗ್ರೆಸ್ನ ಸಂಸ್ಕೃತಿಯಾಗಿದೆ. ಅದಕ್ಕೂ ಮುನ್ನ ಅಭ್ಯರ್ಥಿತನಕ್ಕಾಗಿ ಪಕ್ಷದೊಳಗೆ ಪೈಪೋಟಿ ಇರುವುದು ಸಹಜವೆಂದರು. ಈ ಸಾಲಿನ ಚುನಾವಣೆಯಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿಯವರಾಗಿದ್ದಾರೆ. ಅವರಿಗೆ ನನ್ನ ಸಂಪೂರ್ಣ ಬೆಂಬಲ, ಸಹಕಾರ ಹಾಗೂ ಚುನಾವಣೆ ಎದುರಿಸುವ ಮಾರ್ಗದರ್ಶನ ಇದೆ. ಆ ಮೂಲಕ ಅವರು ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸುವ ಮೂಲಕ ಕಾರ್ಕಳ ಕ್ಷೇತ್ರವು ಮತ್ತೇ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎಂದರು.
ಕಾರ್ಕಳದಲ್ಲಿ ನನಗೂ, ಕಾಂಗ್ರೆಸ್ ಪಕ್ಷಕ್ಕೂ, ಜನರ ನಡುವೆ ತಾಯಿ ಮಗುವಿನ ಕರುಳ ಬಳ್ಳಿಯ ಸಂಬಂಧ ಇದ್ದಂತೆ. ಎಲ್ಲರೂ ನನ್ನನ್ನು ಪ್ರೀತಿಸಿ ಸತತವಾಗಿ ಆರು ಭಾರಿ ಚುನಾಯಿಸುವ ಮೂಲಕ ರಾಷ್ಟ್ರ ರಾಜಕೀಯದಲ್ಲೂ ಗುರುತಿಸುವಂತೆ ಮಾಡಿದ್ದಾರೆ.
1968ರಿಂದ ಇದುವರೆಗೂ ಕಾಂಗ್ರೆಸ್ ಪಕ್ಷಕ್ಕೆ ನೂರರಷ್ಟು ನಿಷ್ಠೆ-ಪ್ರಮಾಣಿಕತೆ ತೋರಿದ್ದೇನೆ. ನನ್ನ ರಾಜಕೀಯವು ರೈತ, ಕೃಷಿ ಕಾರ್ಮಿಕರ ಪರ ಹೋರಾಟದಿಂದಾಗಿ ಅದರಲ್ಲೂ ಗೇಣಿದಾರರ ಪರ ನಡೆದ ಹೋರಾಟವಾಗಿದೆ. ತನ್ಮೂಲಕ ರಾಜ್ಯದಲ್ಲಿ ಕಾರ್ಕಳ ಮಾದರಿ ಎನ್ನಿಸಿಕೊಂಡಿತ್ತೆಂದು ನೆನಪಿಸಿಕೊಂಡರು. ಆ ಮೂಲಕ ಕಾರ್ಕಳದ ಶಾಸಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾದೆ. ಆ ನಂತರ ಸಂಸದನಾಗಿ ಕೇಂದ್ರ ಸಚಿವನಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದೇನೆ. ಜನರ ಸೇವೆಗಾಗಿ ಸತ್ಯ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿ ಹಲವು ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಮಾಣಿ ಪ್ರಯತ್ನ ನಡೆಸಿದ್ದೇನೆ ಎಂದರು.
ಭೂ ಮಸೂದೆ ಕಾಯಿದೆಯಡಿಯಲ್ಲಿ ಗೇಣಿದಾರನಿಗೆ ಭೂಮಿ, ಅಕ್ರಮ-ಸಕ್ರಮದಡಿಯಲ್ಲಿ ಭೂ ಮಂಜೂರು, ಮನೆ ನಿವೇಶನಗಳ ಮಂಜೂರು ಮಾಡಿದ್ದೇನೆ. ಒಂದೇ ದಿನ ಅಜೆಕಾರು,ಕೆರ್ವಾಶೆ,ಮಿಯ್ಯಾರು ಸಂಪರ್ಕದ ಆರು ಸೇತುವೆಗಳಿಗೆ ಒಂದೇ ದಿನ ಚಾಲನೆ ನೀಡಲಾಗಿತ್ತು. ತಾಲೂಕಿನ ಗ್ರಾಮೀಣ ಪ್ರದೇಶಗಳ ಸಂಪರ್ಕ ರಸ್ತೆಗಳನ್ನು, ಸೇತುವೆಗಳನ್ನು ನಿರ್ಮಿಸಲಾಗಿತ್ತು. ಕಾರ್ಕಳ ತಾಲೂಕಿಗೆ ಮಿನಿ ವಿಧಾನ ಸೌಧ ಮಂಜೂರು, ಹೆಬ್ರಿ ತಾಲೂಕು ರಚನೆ, ಹೆಬ್ರಿ ಮಿನಿ ವಿಧಾನಸೌಧಕ್ಕೆ ಹಣ ಮಂಜೂರು, ಕರ್ನಾಟಕದ ಪುರಸಭಾ ವ್ಯಾಪ್ತಿಯಲ್ಲಿ ಮೊಟ್ಟ ಮೊದಲ ಭಾರಿಗೆ ಸುಮಾರು 45 ವರ್ಷಗಳ ಹಿಂದೆ ಕಾರ್ಕಳದಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಆದರೆ ಅದರ ಹೆಸರಿನಲ್ಲಿಯೇ ಹೀಗಿನ ಶಾಸಕರು ರೂ.14 ಕೋಟಿ ವೆಚ್ಚದ ಕಾಮಗಾರಿಯ ನೆಪದಲ್ಲಿ ತೇಪೆ ಹಚ್ಚುವ ಕಾಮಗಾರಿ ಮಾಡಿದ ಪಾಪದ ಫಲವಾಗಿ ಒಳಚರಂಡಿಯೂ ಅಲ್ಲಲ್ಲಿ ಸೋರಿಕೆಯಾಗಿ ಕುಡಿಯುವ ನೀರಿನ ಕೃತಕ ಸಮಸ್ಸೆಯೂ ಎದುರಾಗಿದೆ ಎಂದರು.
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 200 ಹಾಸಿಗೆಯ ಸಾಮಾರ್ಥಯುಳ್ಳ ಆಸ್ಪತ್ರೆಯಾಗಿ ಮೇಲ್ದಾರ್ಜೆಗೇರಿಸಲಾಗಿತ್ತು. ಆಸ್ಪತ್ರೆಯ ನೂತನ ಕಟ್ಟಡಕ್ಕೆ ರೂಪುರೇಷೆಗಳು ಹಾಗೂ ಹೆಬ್ರಿಯಲ್ಲಿ ನೂತನ ಆಸ್ಪತ್ರೆಯ ಕಟ್ಟಡಕ್ಕೆ ರೂಪುರೇಷೆಯನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗಿದೆ ಎಂದರು.ಅವಭಜಿತ ಕಾರ್ಕಳ ತಾಲುಕು ಶಿಕ್ಷಣ ಕ್ರಾಂತಿಗೂ ಒತ್ತು ನೀಡಿದೆ. 10 ಕಿ.ಮೀ.ಗೊಂದರಂತೆ ಪೌಢಶಾಲೆ 15 ಕಿ.ಮೀಗೋಂದರಂತೆ ಪದವಿ ಪೂರ್ವ ಕಾಲೇಜು, ಅಲ್ಲದೇ ವೃತ್ತಿಪರ ಶಿಕ್ಷಣಕ್ಕೆ ಪಾಲಿಟೆಕ್ನಿಕ್ಗಳನ್ನು ಆರಂಭಿಸಲಾಗಿತ್ತು. ಮಂಗಳೂರಿನಲ್ಲಿ ಮಾತ್ರ ಸರಕಾರಿ ಪಥಮ ದರ್ಜೆ ಕಾಲೇಜು ಇತ್ತು. ಅದರ ನಂತರ ಎರಡನೇಯದಾಗಿ ಹೆಬ್ರಿಯಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಗಿತ್ತು ಎಂದರು.
ಕಾರ್ಕಳದಲ್ಲಿ ಬಿಬಿಎಂ ಸರಕಾರಿ ಕಾಲೇಜು ಆರಂಭಿಸಲಾಗಿತ್ತು. ಇವೆರಡ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಪ್ರತಿಷ್ಠಿತ ಕಾಲೇಜು ಎಂದು ಪರಿಗಣಿಸಲಾಗಿತ್ತು.
1992ರಲ್ಲಿ 8 ಲಕ್ಷ ಉಪಧ್ಯಾಯರ ನೇಮಕಾತಿಯೂ ರಾಜ್ಯ ವ್ಯಾಪ್ತಿಯಲ್ಲಿ ನಡೆದಿತ್ತು. ಇದರ ನೇಮಕಾತಿಯಲ್ಲಿ ಲಂಚ ಆಮಿಷ, ಪ್ರಭಾವ ಇಲ್ಲದೇ ನೇರ ನೇಮಕಾತಿ ಮಾಡಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು.ಸಿಇಟಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಹಕಾರಗೊಳಿಸಲಾಗಿದೆ. ಅದರ ಫಲವಾಗಿ ಅದೆಷ್ಟೋ ಮಂದಿ ಇಂಜಿನಿಯರ್, ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಲು ಸಾಧ್ಯವಾಗಿದೆ. ಆದರೆ ಪ್ರಸಕ್ತ ಬಿಜೆಪಿ ಸರಕಾರವು ವೈದ್ಯಕೀಯ ಶಿಕ್ಷಣದ ಆಯ್ಕೆ ಪರೀಕ್ಷೆಯನ್ನು ಸಿಇಟಿಯಿಂದ ಕಿತ್ತು ಹಾಕಿ ನೀಟ್ಗೆ ಸೇರಿಸಿದೆ. ಇದರಿಂದ ರಾಜ್ಯದ ಬಹಳಷ್ಟು ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ನೋವು ತೋಡಿಕೊಂಡರು.
ಕುಡಿಯುವ ನೀರಿಗಾಗಿ ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರ ಫಲವಾಗಿ ಮಂಗಳೂರಿನ ತುಂಬೆಯಲ್ಲಿ ಡ್ಯಾಂ ನಿರ್ಮಾಣಗೊಂಡು ಅಲ್ಲಿ ಕುಡಿಯುವ ನೀರಿನ ಸಮಸ್ಸೆಯನ್ನು ಬಗೆಹರಿಸಲಾಗಿತ್ತು. ಅದರ ಬೆನ್ನಲ್ಲೆ ಕಾರ್ಕಳದ ದುರ್ಗದ ಗ್ರಾಮದ ತೆಳ್ಳಾರು ಬಲ್ಮಗುಂಡಿಯಲ್ಲಿ ಕಿಂಡಿಅಣೆಕಟ್ಟು ನಿರ್ಮಿಸುವ ಮೂಲಕ ಕಾರ್ಕಳ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗಿತ್ತು.
ಅದರ ಬೆನ್ನಲ್ಲೆ ಎಣ್ಣೆಹೊಳೆಯ ಪಟ್ಟಿಬಾವು ಎಂಬಲ್ಲಿ ಅಣೆಕಟ್ಟು ನಿರ್ಮಾಣದ ಯೋಜನೆಗೆ ರೂಪುರೇಷೆ ಸಿದ್ಧಗೊಂಡಿದ್ದರೂ, ಅವೆಲ್ಲವನ್ನು ನಿರ್ಲಕ್ಷಿಸಿ ಎಣ್ಣೆಹೊಳೆಯ ಒಣಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ರೂ. 30 ಕೋಟಿ ವೆಚ್ಚವನ್ನು ರೂ. 138 ಕೋಟಿಗೆ ಏರಿಸುವ ಮೂಲಕ ಜನಸಾಮಾನ್ಯರು ಸರಕಾರಿಕ್ಕೆ ಪಾವತಿಸಿದ ತೆರಿಗೆಯು ವ್ಯರ್ಥವಾಗಿದೆ. ರೂ. 138 ಕೋಟಿವೆಚ್ಚದಲ್ಲಿ ನಿರ್ಮಾಣಗೊಂಡ ಎಣ್ಣೆಹೊಳೆಯ ಅಣೆಕಟ್ಟಿನಲ್ಲಿ ಇಂದು 1 ಲೀ. ನೀರು ನಿಲ್ಲದಂತಾಗಿದೆ ಎಂದರು.
ಇನ್ಫೋಸಿಸ್, ವಿಪ್ರೋ ಸಂಸ್ಥೆಗಳಿಗೆ ಪ್ರೋತ್ಸಾಹಿಸಿದ್ದು ಕಾಂಗ್ರೆಸ್ ಸರಕಾರ. ಎಂಆರ್ಪಿಎಲ್ ಮಂಗಳೂರಿನಲ್ಲಿ ಆರಂಭಿಸಿ ಸ್ಥಳೀಯರಿಗೆ ಹಾಗೂ ಭೂ ಕಳೆದುಕೊಂಡು ಅದೆಷ್ಟೋ ಕುಟುಂಬಕ್ಕೆ ಉದ್ಯೋಗವನ್ನು ಒದಗಿಸಿದ ಕೀರ್ತಿಯೂ ಕಾಂಗ್ರೆಸ್ ಸಲ್ಲುತ್ತದೆ. ಆದರೆ ಇಂದು ಬಿಜೆಪಿಯು ರಾಷ್ಟ್ರೀಮಟ್ಟದ ಪ್ರಭಾವವನ್ನು ಬಳಸಿ ಸ್ಥಳೀಯರಿಗೆ ಉದ್ಯೋಗ ನೀಡದೇ ವಂಚಿಸಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಇಲೆಕ್ಟೋನಿಕ್ಸ್ ಸಿಟಿ, ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಆನೇಕ ಕೈಗಾರಿಕಾ ಸಂಸ್ಥೆಗಳು ತನ್ನ ಆಡಳಿತ ಅವಧಿಯಲ್ಲಿ ಮಂಜೂರುಗೊಳಿಸಿದೆ. ಉಡುಪಿ ಜಿಲ್ಲೆಯಲ್ಲೂ ಒಂದು ವಿಮಾನ ನಿಲ್ದಾಣ ಮಾಡಬೇಕೆಂಬ ಆಶಾಭಾವವನ್ನು ಇದೇ ಸಂದಭದಲ್ಲಿ ವ್ಯಕ್ತಪಡಿಸಿದರು.
ರಾಷ್ಟ್ರಮಟ್ಟದಲ್ಲಿ ವಿದ್ಯುತ್ ಸಮಸ್ಸೆ ನಿವಾರಣೆ ಒನ್ ನ್ಯಾಶನಲ್, ಒನ್ ಗ್ರೀಡ್ ನೆಲೆಯಲ್ಲಿ ಸೋಲಾಪುರದಿಂದ ರಾಯಚೂರಿಗೆ ಪವರ್ ಲೈನ್ ನಿರ್ಮಿಸಿರುವುದು ಕಾಂಗ್ರೆಸ್ ಅವಧಿಯಲ್ಲಿ ಇದರಿಂದ ವಿದ್ಯುತ್ ಸಮಸ್ಸೆ ತಿಳಿಗೊಂಡಿದೆ ಎಂದರು. ಕಾರ್ಕಳದ ಕೇಮಾರಿನಲ್ಲಿ ವಿದ್ಯುತ್ ಸರಬರಾಜು ಘಟಕವನ್ನು ಸ್ಥಾಪಿಸಲಾಗಿತ್ತು. ಆ ಮೂಲಕ ಅವಿಭಜಿತ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ತಲೆದೋರಿದ ವಿದ್ಯುತ್ ಸಮಸ್ಸೆ ನಿವಾರಿಸಲಾಗಿತ್ತು.
ಇಷ್ಟೆಲ್ಲಾ ಕೊಡುಗೆಗಳು ಕಾಂಗ್ರೆಸ್ ಸರಕಾರದಿಂದ ಎಂಬುವುದನ್ನು ಎಲ್ಲೇಖಿಸಿದ ಅವರು 2030 ರೊಳಗೆ ಪೆಟ್ರೋಲ್ ಉತ್ಪತ್ತಿಯಲ್ಲಿ ಸ್ವಾವಲಂಬನೆಗಾಗಿ ಕಚ್ಚಾತೈಲ ದಾಸ್ತಾನು ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ವಿಶ್ವದ ಗುರು ಭಾರತದೆಂದು ಡಂಗುರ ಸಾರುತ್ತಿದ್ದು, ಇಲ್ಲಿ ಯುವ ಸಮುದಾಯ ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಪ್ರತಿವರ್ಷ 2ಕೋಟಿ ಉದ್ಯೋಗ ಒದಗಿಸುವುದಾಗಿ ಪ್ರದಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆ ಹುಸಿಯಾಗಿ, ಸಾಕಷ್ಟು ಮಂದಿಯೂ ಇದ್ದ ಉದ್ಯೋಗವ ನ್ನೇ ಕಳೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಸದಾಶಿವ ದೇವಾಡಿಗ, ಚಂದ್ರಶೇಖರ್ ಬಾಯಾರಿ, ನೀರೆಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಡಿ.ಆರ್. ರಾಜು ಇತರರು ಉಪಸ್ಥಿತರಿದ್ದರು.