ಪಡುಬಿದ್ರೆ, ಏ 27 (DaijiworldNews/HR): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಪ್ರಗತಿಯ ಪಥದಲ್ಲಿ ನಡೆಯುತ್ತಿದ್ದು, ಕೋವಿಡ್ ಕಾಲದಲ್ಲಿ ಲಸಿಕೆಯ ಸಮರ್ಪಕ ವಿತರಣೆ, ಹಸಿವೆ ನಿವಾರಣೆಗೆ ಉಚಿತ ಪಡಿತರದಂತಹ ಕಾರ್ಯಕ್ರಮಗಳಿಂದಾಗಿ ಜನರು ಇಂದು ಭಯಮುಕ್ತವಾಗಿ ಬದುಕುವಂತಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಜ್ಯೋತಿ ಅವರು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪರ ಚುನಾವಣಾ ಪ್ರಚಾರ ಮಾಡಿ ಮತ ಯಾಚಿಸಿದ ಅವರು ಆತ್ಮನಿರ್ಭರ ಭಾರತ ನಿರ್ಮಾಣ ಮಾಡಲು ಬಿಜೆಪಿಯನ್ನು ಗೆಲ್ಲಿಸಬೇಕು. ಬಿಜೆಪಿ ತುಷ್ಟೀಕರಣ ರಾಜಕೀಯ ಮಾಡುವುದಿಲ್ಲ. ಅದರ ನೀತಿಗಳು ಸ್ಪಷ್ಟವಾಗಿವೆ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಒಳಗೊಂಡಿವೆ ಎಂದ ಅವರು ಕರ್ನಾಟಕ ಒಂದು ಸುಂದರ ರಾಜ್ಯ, ಅಭಿವೃದ್ಧಿಗಾಗಿ ಜನರು ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನರೇಂದ್ರ ಮೋದಿಯಂತಹ ಪ್ರಧಾನ ಮಂತ್ರಿ ನಮ್ಮ ರಾಷ್ಟ್ರಕ್ಕೆ ಲಭ್ಯರಾಗಿಲ್ಲವಲ್ಲ ಎಂದು ಪಾಕಿಸ್ತಾನದ ಜನತೆ ಖೇದ ವ್ಯಕ್ತಪಡಿಸುತ್ತಿದ್ದಾರೆ. ಇದು ಮಾಧ್ಯಮಗಳಲ್ಲೂ ವರದಿಯಾಗಿದೆ. ನಿಸ್ವಾರ್ಥದಿಂದ ದುಡಿಯುತ್ತಿರುವ ನರೇಂದ್ರ ಮೋದಿಯವರಿಂದಾಗಿ ಭಾರತ ವಿಶ್ವಗುರುವಾಗುವ ಹಾದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಅವರ ಕೈ ಬಲಪಡಿಸುವುದಕ್ಕಾಗಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಮತದಾರರು ಬೆಂಬಲಿಸಿದರೆ ಮುಂದಿನ ಐದು ವರ್ಷದ ಅವಧಿ ಜನರ ಚಾಕರಿ ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಲಾಲಾಜಿ ಮೆಂಡನ್, ಚುನಾವಣಾ ಪ್ರವಾಸಿ ಪ್ರಭಾರಿಗಳಾದ ವಿಜಯೇಂದ್ರ ಗುಪ್ತ, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಹಿರಿಯ ಮುಖಂಡರಾದ ಎಂ ಕೆ ವಿಜಯ್ ಕುಮಾರ್, ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.