ಉಳ್ಳಾಲ, ಏ 26 (DaijiworldNews/SM): ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ನಾಮಪತ್ರ ಹಿಂಪಡೆಯಲು ಜೀವಬೆದರಿಕೆಯೊಡ್ಡಿದ್ದೇ ಕಾರಣ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರುಗಳಿಬ್ಬರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರುಗಳಾದ ಮುಸ್ತಾಫ ಯಾನೆ ಖಬುರು ಮುಸ್ತಾಫ, ಉಸ್ಮಾನ್ ಕಲ್ಲಾಪು, ರಿಯಾಝ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಎ. 21ರಂದು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಎ ಮತ್ತು ಬಿ ಫಾರಂ ಪಡೆದು ಉಳ್ಳಾಲ ನಗರಸಭೆ ಚುನಾವಣಾ ಕಚೇರಿಯಲ್ಲಿ ಅಲ್ತಾಫ್ ಕುಂಪಲ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಪರಿಶೀಲನೆಯಲ್ಲಿ ಸಿಂಧುತ್ವಗೊಂಡ ಘೋಷಣೆ ನಂತರ ಅದೇ ದಿನ ಸಂಜೆ 3 ಗಂಟೆಗೆ ಮೇಲಂಗಡಿ ದರ್ಗಾ ಹಿಂಭಾಗದಲ್ಲಿ ಮುಸ್ತಾಫ, ಉಸ್ಮಾನ್, ರಿಯಾಝ್ ಹಾಗೂ ಇತರರು ಸೇರಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಅವರನ್ನು ಬೆದರಿಕೆ ಹಾಕಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ, ಬೆದರಿಕೆ ಒಡ್ಡಿ, ಉಮೇದ್ವಾರಿಕೆ ವಾಪಸ್ಸು ಪಡೆಯುವ ಪತ್ರಕ್ಕೆ ಸಹಿಯನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ. ಬಳಿಕ ಅಲ್ಲಿಂದ ಎಳೆದು ತಂದು ಚುನಾವಣಾಧಿಕಾರಿಗಳಿಗೆ ಉಮೇದ್ವಾರಿಕೆ ವಾಪಸ್ಸು ತೆಗೆದುಕೊಳ್ಳುವ ಪತ್ರವನ್ನು ಸಲ್ಲಿಸುವಂತೆ ಮಾಡಿದ್ದಾರೆ.
ಘಟನೆ ನಂತರ ಮತ್ತೆ ತಡರಾತ್ರಿ ಮನೆಗೆ ನುಗ್ಗಿ ಬೆದರಿಕೆಯೊಡ್ಡಿದ್ದಾರೆಂದು ದೂರಲಾಗಿದ್ದು ಉಮೇದ್ವಾರಿಕೆ ಹಿಂಪಡೆಯುವ ಸಂದರ್ಭ ಅಭ್ಯರ್ಥಿ ಅಲ್ತಾಫ್ ಪರ ಅನುಮೋದಕರಿಗೆ ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಲು ಅವಕಾಶ ನೀಡದಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.