ಕುಂದಾಪುರ, ಮಾ 25(SM): ಐಸ್ ಕ್ರೀಂ ಸೇವಿಸಿದ ಮೂವತ್ತಕ್ಕೂ ಹೆಚ್ಚು ಮಕ್ಕಳಿಗೆ ಫುಡ್ ಪಾಯಿಸನ್ ಆಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ತಡರಾತ್ರಿ ಕುಂದಾಪುರ ತಾಲೂಕಿನ ಬೆಳ್ವೆ, ಹೆಂಗವಳ್ಳಿ ಹಾಗೂ ತೊಂಬತ್ತು ಪ್ರದೇಶಗಳಲ್ಲಿ ನಡೆದಿದೆ.
ಪ್ರಕರಣದಲ್ಲಿ ಗಂಭೀರಗೊಂಡ ಸುಮಾರು ಮೂವತ್ತಕ್ಕೂ ಹೆಚ್ಚು ಮಕ್ಕಳನ್ನು ಬೆಳ್ವೆ ಪ್ರಾಥಮಿಕ ಆರೋಗ್ಯ ಕೆಂದ್ರ ಹಾಗೂ ಹಾಲಾಡಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತೊಂಬತ್ತು ನಿವಾಸಿಗಳಾದ 9 ಮಕ್ಕಳನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಭಾನುವಾರ ಸಂಜೆ ಮುದೂರಿನ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ಐಸ್ ಕ್ರೀಂ ಮಾರಲು ಬಂದಿದ್ದರು. ಪ್ರತೀ ದಿನವೂ ಈ ಭಾಗದಲ್ಲಿ ಐಸ್ ಮಾರುತ್ತಿದ್ದರು ಎನ್ನಲಾಗಿದೆ. ಭಾನುವಾರ ರಜೆಯಾಗಿದ್ದರಿಂದ ಮಕ್ಕಳ ಜೊತೆಗೆ ಪೋಷಕರೂ ಕೂಡ ಐಸ್ ಕ್ರೀಂ ಖರೀದಿಸಿದ್ದರು ಎನ್ನಲಾಗಿದೆ. ಭಾನುವಾರ ತಡ ರಾತ್ರಿ ಸುಮಾರು 1.30ಕ್ಕೆ ಐಸ್ ಕ್ರೀಂ ತಿಂದ ಮಕ್ಕಳು ವಾಂತಿ ಮಾಡಲಾರಂಭಿಸಿದ್ದಾರೆ. ವಾಂತಿ ನಿಲ್ಲದೇ ಇದ್ದುದರಿಂದ ರಾತ್ರಿ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಳಿಕ ಅವರನ್ನು ಸೋಮವಾರ ಬೆಳಿಗ್ಗೆ ಹಾಲಾಡಿ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಬಗ್ಗೆ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಆಸ್ಪತ್ರೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.