ಕುಂದಾಪುರ, ಏ 25 (DaijiworldNews/MS): ಕೇಂದ್ರದ ನರೇಂದ್ರ ಮೋದಿ ಸರಕಾರ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ಸರಕಾರದ ಅಭಿವೃದ್ದಿ ಕಾರ್ಯಗಳು, ರಾಷ್ಟ್ರೀಯತೆಗೆ ನೀಡಿದ ಒತ್ತು, ಡಬ್ಬಲ್ ಇಂಜಿನ್ ಸರಕಾರದ ಸಾಧನೆಯನ್ನು ಜನತೆ ಗಮನಿಸಿದ್ದಾರೆ. ಈ ಚುನಾವಣೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಭಾವ, ಕ್ಷೇತ್ರದಲ್ಲಿನ ಸಾಧನೆಗಳು, ಕಿರಣ್ ಕೊಡ್ಗಿಯವರನ್ನು ದಾಖಲೆಯ ಅಂತರದಲ್ಲಿ ಜಯ ಗಳಿಸಲಿದ್ದಾರೆ ಎಂದು ದೆಹಲಿ ರಾಜ್ಯ ಸರ್ಕಾರದ ವಿರೋಧ ಪಕ್ಷದ ನಾಯಕ, ಉಡುಪಿ ಜಿಲ್ಲಾ ಬಿಜೆಪಿ ಉಸ್ತುವಾರಿ ವಿಜೇಂದ್ರ ಗುಪ್ತ ಹೇಳಿದರು.
ಅವರು ಕುಂದಾಪುರ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಶಾಂತಿ ಸುವ್ಯವಸ್ಥತೆಗೆ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ. ಇವತ್ತು ಬಾಂಬ್ ಸ್ಪೋಟದ ಪ್ರಕರಣಗಳು ಇಲ್ಲ, ವಿದ್ವಾಂಸಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಸುರಕ್ಷತೆಯಲ್ಲಿ ಜನರು ಇದ್ದಾರೆ. ಭದ್ರತೆಗೆ ಧಕ್ಕೆ ತರುವ, ಗಲಾಭೆಗಳ ಸೃಷ್ಟಿಗೆ ಉತ್ತೇಜನ ನೀಡುವ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ದಿಟ್ಟ ನಿಲುವಿನಿಂದ ದೇಶ, ಕರ್ನಾಟಕದಲ್ಲಿ ಜನ ನಿರ್ಭೀತಿಯಿಂದ ಇದ್ದಾರೆ ಎಂದರು.
40% ಕಮಿಷನ್ ಆರೋಪದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ದಾಖಲೆ ರಹಿತ ಆರೋಪ. ಕಾಂಗ್ರೆಸ್ ಬಳಿ ಈ ಬಗ್ಗೆ ಸ್ಪಷ್ಟವಾದ ದಾಖಲೆ ಇದ್ದರೆ ಕಾನೂನು ಹೋರಾಟ ಮಾಡಲಿ, ಸುಮ್ಮನೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ, ಅದು ಗಾಳಿಯಲ್ಲಿ ಗುಂಡು ಹಾರಿಸಿದಂತೆ.ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಯಾವ ತಂತ್ರಗಾರಿಕೆಯೂ ಈ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ" ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಕ್ಷೇತ್ರದ ಪ್ರಭಾರಿ ಶ್ಯಾಮಲ ಕುಂದರ್, ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ ಬೀಜಾಡಿ, ಸತೀಶ ಪೂಜಾರಿ ವಕ್ವಾಡಿ, ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು ಉಪಸ್ಥಿತರಿದ್ದರು