ಮಂಗಳೂರು, ಏ 24 (DaijiworldNews/SM): ಉಳ್ಳಾಲದಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಜೆ.ಡಿ.ಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಸುದ್ದಿಗೋಷ್ಠಿ ನಡೆಸಿದ್ದು, ಬೆದರಿಕೆ ಹಾಕಿಸಿ ಅಲ್ತಾಫ್ ಅವರಿಂದ ನಾಮಪತ್ರ ವಾಪಸ್ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಂಟು ಕ್ಷೇತ್ರಗಳಲ್ಲಿ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ನಮ್ಮ ಎಂಟೂ ನಾಮಪತ್ರಗಳು ಸಿಂಧುವಾಗಿ ಸ್ವೀಕಾರವಾಗಿದೆ. ಮಂಗಳೂರು ಉತ್ತರದಲ್ಲಿ ಪ್ರಭಾವಿ ನಾಯಕ ಮೊಯಿದ್ದೀನ್ ಬಾವಾ ಸ್ಪರ್ಧೆ ಮಾಡಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಅಲ್ತಾಫ್ ಎಂಬ ಅಭ್ಯರ್ಥಿಯನ್ನ ಆಯ್ಕೆ ಮಾಡಿದ್ದೆವು. ಜನಸಾಮಾನ್ಯರಿಗೆ ಬೇಕೆನಿಸಿದ ಸಾಮಾಜಿಕ ಕಳಕಳಿಯ ವ್ಯಕ್ತಿ ಅವರು. ಇವರಿಗೆ ಜನರ ಪ್ರೀತಿ, ವಿಶ್ವಾಸ ಇದೆ, ಉತ್ತಮ ನಾಯಕ ಇವರು. ಅಲ್ತಾಪ್ ಎ.20ರಂದು ಉಳ್ಳಾಲದಲ್ಲಿ ನಾಮಪತ್ರ ಸಲ್ಲಿಸಿದ್ದರು. ಮುಂದೆ ಅವರ ಹಬ್ಬದ ದಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರ ಬರ್ತಾ ಇದ್ದರು. ಆ ವೇಳೆ ಯಾರೋ ಅವರನ್ನು ಕರೆದುಕೊಂಡು ಹೋಗಿ ಪತ್ರಕ್ಕೆ ಸಹಿ ಹಾಕಿಸಿ ಚುನಾವಣಾಧಿಕಾರಿ ಎದುರು ನಿಲ್ಲಿಸಿದರು. ಚುನಾವಣಾಧಿಕಾರಿ ಎದುರು ನಿಲ್ಲಿಸಿ ನಾಮ ಪತ್ರ ವಾಪಸ್ ತೆಗೆಸಿದರು. ಸಜ್ಜನ ವ್ಯಕ್ತಿ ಕುಟುಂಬದ ಬೆದರಿಕೆಗೆ ಒಳಗಾಗಿ ನಾಮ ಪತ್ರ ವಾಪಸ್ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಂಥಹ ಘಟನೆ ಇಡೀ ಜಿಲ್ಲೆಗೆ ಒಂದು ಕಪ್ಪು ಚುಕ್ಕೆಯಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಎದುರಿಸಲಾಗದವರು ಎಂಥ ನಾಯಕ? ಇದನ್ನ ನಾವು ಉಗ್ರವಾಗಿ ಖಂಡಿಸ್ತೇವೆ, ಕಾನೂನು ಮೂಲಕ ಹೋರಾಟ ಮಾಡ್ತೇವೆ ಎಂದಿದ್ದಾರೆ. ಪೊಲೀಸ್ ಕಮಿಷನರ್ ಹಾಗೂ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ. ಒಬ್ಬ ಪ್ರಭಾವಿ ಮತ್ತು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಷಡ್ಯಂತ್ರ ಇದಾಗಿದೆ ಎಂದು ಅವರು ದೂರಿದ್ದಾರೆ. ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನ ಎದುರಿಸಲು ಆಗಿಲ್ಲ. ಇಂಥ ಹುನ್ನಾರಕ್ಕೆ ಖಂಡನೆ ಇದೆ, ಸಂಬಂಧ ಪಟ್ಟವರ ತನಿಖೆ ಆಗಲಿ ಎಂದು ಅವರು ಆಗ್ರಹಿಸಿದ್ದಾರೆ.