ಮಂಗಳೂರು, ಏ 24 (DaijiworldNews/SM): ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಎ.27ರಿಂದ 29ರ ಬೆಳಗ್ಗಿನ ತನಕ ನೀರು ಸರಬರಾಜು ವ್ಯತ್ಯಯಗೊಳ್ಳಲಿದೆ.
ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟಿನಲ್ಲಿ ತಾಂತ್ರಿಕ ಕಾಮಗಾರಿ ಹಿನ್ನೆಲೆಯಲ್ಲಿ ಎ.27ರಂದು ಬೆಳಗ್ಗೆ 6ಗಂಟೆಯಿಂದ 29ರ ಬೆಳಗ್ಗೆ 6 ಗಂಟೆಯವರೆಗೆ 48ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಅಣೆಕಟ್ಟಿನ ಎಚ್ಎಲ್ಪಿಎಸ್ 2- 80 ಎಂಎಲ್ಡಿ ರೇಚಕ ಸ್ಥಾವರದಲ್ಲಿರುವ 1,200 ಎಂ.ಎಂ. ವ್ಯಾಸದ ಕೊಳವೆ ದುರಸ್ತಿ ಕಾಮಗಾರಿ ಮತ್ತು ಎಲ್ಎಲ್ಪಿಎಸ್-1 ಪಂಪ್ ನಂಬ್ರ-2ರ ಹೆಡರ್ ಬದಲಾವಣೆ ಮತ್ತು ಇತರ ಪೂರಕ ಕಾಮಗಾರಿ ನಡೆಯಲಿದೆ. ಇದರಿಂದಾಗಿ ನೀರು ಪೂರೈಕೆ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆ ಆಡಳಿತದೊಂದಿಗೆ ಸಹಕರಿಸುವಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.