ಉಡುಪಿ, ಏ 24 (DaijiworldNews/HR): ವಿಧಾನಸಭೆ ಚುನಾವಣೆಗೆ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದ ಕೆ.ಕೃಷ್ಣಮೂರ್ತಿ ಆಚಾರ್ಯ ನಾಮಪತ್ರವನ್ನು ಹಿಂದಕ್ಕೆ ತೆಗದುಕೊಂಡಿದ್ದಾರೆ.
ಇಂದು ಉಡುಪಿಯಲ್ಲಿ ಡಿ. ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರ್ಯಾಲಿ ನಡೆದಿದ್ದು, ಈ ವೇಳೆ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು ನಾಮಪತ್ರವನ್ನು ಹಿಂದಕ್ಕೆ ತೆಗದುಕೊಂಡು ಮತ್ತೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ.
ಈ ಕುರಿತು ಮಾತನಾಡಿದ ಕೆ.ಕೃಷ್ಣಮೂರ್ತಿ ಆಚಾರ್ಯ, ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬೇಡಿಕೆ ಇಟ್ಟಿದ್ದೇನ. ಡಿಕೆಶಿ ನನ್ನ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ. 19 ವರ್ಷ ಉಡುಪಿಯಲ್ಲಿ ಕಾಂಗ್ರೆಸನ್ನು ಕಟ್ಟಿ ಬೆಳೆಸಿದ್ದೇನೆ. ಮೂರು ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಯಾವತ್ತಾದರೂ ಒಂದು ದಿನ ಶಾಸಕ ಆಗಿಯೇ ಆಗುತ್ತೇನೆ ಎಂದಿದ್ದಾರೆ.
ಇನ್ನು ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7 ನಾಮಪತ್ರಗಳನ್ನು ಸೋಮವಾರ ಹಿಂಪಡೆಯಲಾಗಿದೆ.
ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಲು ಇಂದು ಕೊನೆಯ ದಿನವಾಗಿದ್ದು, ಉಡುಪಿಯಿಂದ ಕಾಂಗ್ರೆಸ್ ನಿಂದ ಟಿಕೆಟ್ ಗೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಟಿಕೆಟ್ ಕೈತಪ್ಪಿತ್ತು. ಇದರಿಂದ ಸಹಜವಾಗಿ ಅಸಮಾಧನಾಗೊಂಡಿದ್ದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು.