ಮಂಗಳೂರು, ಏ. 24 (DaijiworldNews/HR): ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಎ. 20ರಂದು ಅಪರಾಹ್ನ 3:28 ಸುಮಾರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವೀಕ್ಷಕರೊಂದಿಗೆ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಕೆಟ್ಟ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಲ್ಲದೆ ‘ಒಂದೂವರೆ ತಿಂಗಳ ಕಾಣಿಕೆ ನೀಡುವೆ. ಒಬ್ಬ ಕೆಎಂಎಫ್ ಸಿಬ್ಬಂದಿಯನ್ನು ಈಗಲೇ ಮಂಗಳೂರಿನಿಂದ ತುಮಕೂರಿಗೆ ಕಳುಹಿಸಿಕೊಡಬೇಕು ಎಂಬುದಾಗಿ ಒತ್ತಡ ಹಾಕಿದ್ದಾನೆ’ ಎಂದು ಜಿಲ್ಲಾಧಿಕಾರಿಯವರು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.