ಬ್ರಹ್ಮಾವರ, ಏ. 23 (DaijiworldNews/SM): ದೋಣಿ ಅವಘಡದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಕ್ಕುಡೆ ಕಿಣಿಯರ ಕುದ್ರು ಸಮೀಪ ನಡೆದಿದೆ. ನೀರು ಪಾಲಾದವರನ್ನು ಉಡುಪಿ ಮತ್ತು ಶೃಂಗೇರಿ ಮೂಲದ ಇಬಾಜ್, ಫಜಾನ್, ಸೂಫಾನ್ ಫರಾನ್ ಎಂದು ಗುರುತಿಸಲಾಗಿದೆ. ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ತೆರಳಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂರು ಮಂದಿ ಯುವಕರು ಮೃತಪಟ್ಟಿದ್ದು, ಓರ್ವ ನೀರು ಪಾಲಾಗಿ, ಮೂವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ರಂಝಾನ್ ರಜೆಯ ಹಿನ್ನೆಲೆಯಲ್ಲಿ ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೀರ್ಥಳ್ಳಿ ಮೂಲದ ಯುವಕರು ಆಗಮಿಸಿದ್ದರು. ಸಂಬಂಧಿಕರ ಮನೆಯಿಂದ ಒಟ್ಟು ಏಳು ಮಂದಿ ಸಂಜೆ ವೇಳೆ ಚಿಪ್ಪು ಮೀನು ಹಿಡಿಯುವುದಕ್ಕಾಗಿ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಅವಘಡ ಸಂಭವಿಸಿ, ಏಳು ಮಂದಿ ನೀರಿಗೆ ಬಿದ್ದರು. ಇದರಲ್ಲಿ ಮೂವರು ಈಜಿ ಕೊಂಡು ಕುದ್ರುವಿಗೆ ಸೇರಿಕೊಂಡಿದ್ದಾರೆನ್ನಲಾಗಿದೆ. ಉಳಿದ ನಾಲ್ವರು ನೀರಿನಲ್ಲಿ ಮೂವರು ಮುಳುಗಿ ಮೃತಪಟ್ಟಿದ್ದಾರೆ. ಮೃತರ ಪತ್ತೆಗಾಗಿ ಹುಡುಕಾಟ ನಡೆಸಿದಾಗ ಮೂರು ಮಂದಿಯ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳೀಯರು, ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.