ಉಡುಪಿ, ಏ 23 (DaijiworldNews/HR): ಸೋಮೇಶ್ವರ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೆಬ್ರಿ ಪೊಲೀಸ್ ಠಾಣೆಯ ಎಎಸ್ಐ ಮಹಾಲಿಂಗ ಮತ್ತು ಕಾನ್ಸ್ಟೆಬಲ್ಗಳಾದ ರಾಮತ್ ವುಲ್ಲಾ, ಸುರೇಶ್, ಹಾಲೇಶಪ್ಪ ಅವರು ಸೋಮೇಶ್ವರ ಚೆಕ್ಪೋಸ್ಟ್ನಲ್ಲಿ ಅ.19ರಂದು ರಾತ್ರಿ 10 ಗಂಟೆ ಸುಮಾರಿಗೆ ವಾಹನ ತಪಾಸಣೆ ನಡೆಸುತ್ತಿದ್ದರು.
ಇನ್ನು ವಾಹನ ತಪಾಸಣೆ ನಡೆಸುತ್ತಿದ್ದಾಗ ಆಶೋಕ್ ಲೈಲ್ಯಾಂಡ್ ಪಿಕಪ್ ವಾಹನವನ್ನು ಅದರ ಚಾಲಕ ರಾಜೇಂದ್ರ ಇವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮತ್ ವುಲ್ಲಾ ಮತ್ತು ಕೃಷ್ಣ ಆಚಾರಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರುಗಳಿಗೆ ಗಾಯವಾಗಿದ್ದು. ಕೂಡಲೇ ಮಹಾಲಿಂಗ ರವರು ಗಾಯಾಳುವನ್ನು ಆರೈಕೆ ಮಾಡಿ ಅವರನ್ನು ಬದಿಯಲ್ಲಿ ಕುಳ್ಳಿರಿಸಿ 108 ಅಂಬುಲೈನ್ಸ್ ವಾಹನಕ್ಕೆ ಕರೆ ಮಾಡಿದಾಗ ಅದು ಪೆರ್ಡೂರುನಲ್ಲಿರುವುದಾಗಿ ತಿಳಿದಂತೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಸಲುವಾಗಿ ವಾಹನವನ್ನು ಕಾಯುತ್ತಿರುವಾಗ ಆಗುಂಬೆ ಕಡೆಯಿಂದ ಒಂದು ಕಾರು ಬರುತ್ತಿದ್ದು. ಅದನ್ನು ನಿಲ್ಲಿಸಿ ಒಳಗಿದ್ದ ಇಬ್ಬರು ವ್ಯಕ್ತಿಗಳಿಗೆ ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ.
ಆಗ ಇಬ್ಬರು ವ್ಯಕ್ತಿಗಳು ನೀವು ನಮ್ಮ ಸಂಬಳದಲ್ಲಿ ಬದುಕುವವರು ನಮ್ಮ ಕಾರನ್ನು ನಿಲ್ಲಿಸಲು ನೀವು ಯಾರು? ಎಂದು ಹೇಳಿ ಎಎಸ್ಐ ಮತ್ತು ಇತರ ಸಿಬ್ಬಂದಿಯನ್ನು ತಳ್ಳಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವೇಳೆ ಸ್ಥಳೀಯರು ಜಮಾಯಿಸಲು ಪ್ರಾರಂಭಿಸುತ್ತಿದ್ದಂತೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.