ಮಂಗಳೂರು, ಏ 22 (DaijiworldNews/HR): ಸೇನೆಯ ರಾಷ್ಟ್ರೀಯ ರೈಫಲ್ಸ್ ತುಕಡಿಗೆ ಸೇರಿದ ಜಮ್ಮುವಿನ ಪೂಂಚ್-ರಜೌರಿ ವಿಭಾಗದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿದ್ದ ಸೇನಾ ವಾಹನವೊಂದರ ಮೇಲೆ ಭಯೋತ್ಪಾದಕರು ಗ್ರೆನೇಡ್ ಹಾಗೂ ಅತ್ಯಾಧುನಿಕ ವಿದೇಶಿ ಶಸ್ತ್ರಾಸ್ತ್ರಗಳ ಮೂಲಕ ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದು, ಓರ್ವ ಸೈನಿಕ ತೀವ್ರ ಗಾಯಗೊಂಡಿದ್ದು, ಸೇನಾ ವಾಹನ ಹೊತ್ತಿ ಉರಿದು ನಾಶವಾಗಿದೆ.
ಇಂದು ಸಂಜೆ ಮಂಗಳೂರಿನ ಕದ್ರಿಯಲ್ಲಿರುವ ಸೈನಿಕ ಸ್ಮಾರಕದಲ್ಲಿ ನಗರದ ಪ್ರಮುಖರು ಸೇರಿ ರಾಷ್ಟ್ರಸೇವೆಗಾಗಿ ಬಲಿದಾನ ಗೈದು ಹುತಾತ್ಮರಾದ ರಾಷ್ಟ್ರೀಯ ರೈಫಲ್ಸ್ನ ಸೈನಿಕರಾದ ಹವಾಲ್ದಾರ್ ಮನ್ದೀಪ್ ಸಿಂಗ್, ಲ್ಯಾನ್ಸ್ ನಾಯಕ್ ಕುಲವಂತ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಶೀಷ್, ಸಿಪಾಯಿ ಸೇವಕ್ ಸಿಂಗ್ ಮತ್ತು ಸಿಪಾಯಿ ಹರ್ ಕಿಶನ್ ಸಿಂಗ್ ರವರ ಬಲಿದಾನವನ್ನು ಸ್ಮರಿಸಿ,
ಪುಷ್ಪಾಂಜಲಿ ಮ್ತು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹುತಾತ್ಮರಾದ ಸೈನಿಕರ ರಾಷ್ಟ್ರ ಸಮರ್ಪಿತ ಬದುಕು ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತಾಗಲಿ ಹಾಗೂ ದೇಶವಾಸಿಗಳಾದ ನಾವು ಮಾಡುವ ಎಲ್ಲ ಕೆಲಸಗಳಲ್ಲಿ ರಾಷ್ಟ್ರ ಮೊದಲು ಎನ್ನುವ ದೇಶಾಭಿಮಾನವನ್ನು ಜಾಗೃತಗೊಳಿಸಲಿ ಎಂದು ವಿಧಾನ ಪರಿಷತ್ನ ಮಾಜಿ ಸದಸ್ಯ ಹಾಗೂ ಮಾಜಿ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸುತ್ತಾ, ಪಾಪಿ ಉಗ್ರರ ಈ ದುಷ್ಕೃತ್ಯವನ್ನು ದೇಶವಾಸಿಗಳ ಪರವಾಗಿ ತೀವ್ರವಾಗಿ ಖಂಡಿಸಿದರು.
ಭಾಜಪಾದ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮನಪಾ ಸದಸ್ಯ ಮನೋಹರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಭಾಜಪಾದ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಹಿರಿಯ ವಕೀಲರು ಹಾಗೂ ಭಾಜಪಾ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಮತ್ತು ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ಸಂತೋಷ್ ನಾಯಕ್ ಮತ್ತಿತರ ಗಣ್ಯರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.