ಬಂಟ್ವಾಳ, ಏ 22 (DaijiworldNews/MS): 2023 ರ ವಿಧಾನ ಸಭಾ ಚುನಾವಣಾ ನಾಮಪತ್ರ ಪರಿಶೀಲನೆ ವೇಳೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಸಲ್ಲಿಸಲಾಗಿದ್ದ ಒಟ್ಟು 8 ನಾಮಪತ್ರಗಳ ಪೈಕಿ ಎರಡು ನಾಮಪತ್ರಗಳು ಕೆಲವೊಂದು ಬಲವಾದ ಕಾರಣಗಳಿಗಾಗಿ ತಿರಸ್ಕೃತಗೊಂಡಿದ್ದು,ನಿಯಮ ಪ್ರಕಾರ ಸರಿ ಇರುವ 6 ನಾಮಪತ್ರಗಳು ಅಂಗೀಕೃತವಾಗಿದೆ ಎಂದು ಚುನಾವಣಾ ಕಚೇರಿ ಮಾಹಿತಿ ನೀಡಿದೆ.
ಭಾರತೀಯ ಜನತಾ ಪಾರ್ಟಿಯ ರಾಜೇಶ್ ನಾಯ್ಕ್ ಯು, ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಎಂ ಇಲಿಯಾಸ್, ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಯುವ (ಪಕ್ಷೇತರ ಅಭ್ಯರ್ಥಿ) ಅಬ್ದುಲ್ ಮಜೀದ್ ಖಾನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಿ. ರಮಾನಾಥ ರೈ, ಜಾತ್ಯಾತೀತ ಜನತಾ ದಳದ ಪ್ರಕಾಶ್ ರಫಾಯಲ್ ಗೋಮ್ಸ್, ಆಮ್ ಆದ್ಮಿ ಪಕ್ಷದ ಪುರುಷೋತ್ತಮ ರವರ ನಾಮಪತ್ರ ಅಂಗೀಕೃತವಾಗಿರುತ್ತದೆ.
ಉಳಿದಂತೆ ಉತ್ತಮ ಪ್ರಜಾಕೀಯ ಪಕ್ಷದ ಅನೀಶ್ ಶೆಟ್ಟಿಯವರು 10 ಸೂಚಕರ ಬದಲಾಗಿ ಕೇವಲ 7 ಸೂಚಕರನ್ನು ನೀಡಿರುತ್ತಾರೆ. ಪಕ್ಷೇತರ ಅಭ್ಯರ್ಥಿ ಬಿ ಟಿ ಕುಮಾರ್ ರವರು ನಾಮಪತ್ರ ಪೂರ್ಣವಾಗಿ ತುಂಬಿಸಿಲ್ಲ, ಠೇವಣಿ ಪಾವತಿಸಿಲ್ಲ, ಸೂಚಕರನ್ನು ನೀಡಿಲ್ಲ, ನಮೂನೆ 26 ತುಂಬಿಲ್ಲ. ಆದ್ದರಿಂದ ಈ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಬಂಟ್ವಾಳ ಚುನಾವಣಾ ಕಚೇರಿ ಅಧಿಕೃತವಾಗಿ ತಿಳಿಸಿದೆ.