ಬಂಟ್ವಾಳ, ಏ 22 (DaijiworldNews/MS): ಆಟೋ ರಿಕ್ಷಾಗಳ ಗ್ಯಾಸ್ ಸಿಲಿಂಡರ್ ವೆಚ್ಚ ಕಡಿಮೆಯಾಗಿದ್ದರೂ ಬಂಟ್ವಾಳ ತಾಲೂಕಿನಲ್ಲಿ ಕಡಿಮೆ ಮಾಡದ ಬಗ್ಗೆ ಕೂಡಲೇ ಕಡಿಮೆ ಗೊಳಿಸುವಂತೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಆಟೋ ರಿಕ್ಷಾಗಳಿಗೆ ಉಪಯೋಗ ಮಾಡುತ್ತಿರುವ ಗ್ಯಾಸ್ ಸಿಲಿಂಡರ್ಗಳ ವೆಚ್ಚವನ್ನು ಸರಕಾರವು ಕಡಿಮೆಗೊಳಿಸಿದ್ದು, ಅದರಂತೆ ಈಗಾಗಲೇ ಎಲ್ಲಾ ಕಡೆಯ ಪೆಟ್ರೋಲ್ ಬಂಕ್ಗಳಲ್ಲಿ ಆಟೋ ಗ್ಯಾಸ್ನ ದರವನ್ನು ಕಡಿಮೆ ಮಾಡಿದ್ದು, ಆದರೆ ಬಂಟ್ವಾಳ ತಾಲೂಕಿನ ಪೆಟ್ರೋಲ್ ಬಂಕ್ಗಳಲ್ಲಿ ಈ ಮೊದಲಿನ ದರವನ್ನೇ ಪಡೆಯುತ್ತಿದ್ದು, ಈ ಬಗ್ಗೆ ಬಂಕ್ ನವರಲ್ಲಿ ವಿಚಾರಿಸಿದಾಗ ನಮಗೆ ಈ ಬಗ್ಗೆ ಆದೇಶ ಬಂದಿರುವುದಿಲ್ಲವೆಂದು ಹೇಳುತ್ತಾರೆ. ಆದರೆ ಮಂಗಳೂರು ನಗರದಲ್ಲಿ ಕೂಡಾ ಗ್ಯಾಸ್ ಸಿಲಿಂಡರ್ ದರ ಕಡಿಮೆ ಮಾಡಿರುತ್ತಾರೆ. ಬಂಟ್ವಾಳದಲ್ಲಿ ಸಾವಿರಾರು ಬಡ ಆಟೋ ಚಾಲಕರಿದ್ದು, ಗ್ಯಾಸ್ ದರ ಕಡಿಮೆಯಾದರೂ, ನಮಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಈ ಬಗ್ಗೆ ನಾವುಗಳು ಬಂಟ್ವಾಳ ತಹಶೀಲ್ದಾರ್ ರವರಿಗೆ ಮೌಖಿಕವಾಗಿ ತಿಳಿಸಿದ ಮೇರೆಗೆ ತಹಶೀಲ್ದಾರರು ಕೂಡಾ ವಿಚಾರಿಸಿದಾಗ, ಅವರಲ್ಲಿ ಕೂಡಾ ಬಂಕ್ ಮಾಲಕರು ನಮಗೆ ಆದೇಶ ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ.
ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ, ಬಂಟ್ವಾಳ ತಾಲೂಕು ಪೆಟ್ರೋಲ್ ಬಂಕ್ ಮಾಲಕರಿಗೂ ಸರಕಾರದ ಆದೇಶವನ್ನು ತಲುಪಿಸಿ, ಗ್ಯಾಸ್ ದರವನ್ನು ಕಡಿಮೆ ಮಾಡುವ ಬಗ್ಗೆ ಕ್ರಮ ಜರುಗಿಸಿ, ಬಡ ಆಟೋ ಚಾಲಕರಿಗೆ ನ್ಯಾಯ ದೊರಕಿಸಿಕೊಡಬೇಕಾಗಿ ಮನವಿ ಸಲ್ಲಿಸಿದ್ದಾರೆ.