ಕುಂದಾಪುರ, ಏ.21 (DaijiworldNews/SM): ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೇಹಾ ಜೆ.ರಾವ್ ಪಿಯುಸಿ ಪರೀಕ್ಷೆಯಲ್ಲಿ 594 ಅಂಕಗಳನ್ನು ಪಡೆದಕೊಂಡಿದ್ದು ಆ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
600 ಅಂಕಗಳಲ್ಲಿ 594ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಂಸ್ಕೃತ, ಕಂಪ್ಯೂಟರ್ನಲ್ಲಿ 100, ರಸಾಯನಶಾಸ್ತ್ರ, ಗಣಿತದಲ್ಲಿ 99, ಇಂಗ್ಲಿಷ್, ಭೌತಶಾಸ್ತ್ರದಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.
ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿ ಆಶೀರ್ವಾದ ಚಿನ್ನದ ಆಭರಣ ತಯಾರಿಕಾ ಮಳಿಗೆ ಹೊಂದಿರುವ ಕುಂದಾಪುರ ಬಸ್ರೂರು ಮೂರುಕೈ ನಿವಾಸಿ ಜಗದೀಶ್ ರಾವ್ ಎಚ್. ಹಾಗೂ ಸ್ಮೀತಾ ದಂಪತಿಯ ಇಬ್ಬರು ಮಕ್ಕಳಲ್ಲಿ ನೇಹಾ ಮೊದಲನೇಯವರು. ಅವರಿಗೆ ಒಬ್ಬ ಕಿರಿಯ ಸಹೋದರ ಇದ್ದಾರೆ. ಎಲ್.ಕೆ.ಜಿ ಯಿಂದ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಅವರು ನಗರದ ಶ್ರೀ ವೆಂಕಟ ರಮಣ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿಯೇ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ನೇಹಾ, ಪರೀಕ್ಷೆ ತುಂಬಾ ಸುಲಭವಾಗಿದ್ದರಿಂದ ಒಳ್ಳೆಯ ಅಂಕಗಳು ಬರುವ ನಿರೀಕ್ಷೆ ಇತ್ತು. ಆದರೆ ರಾಜ್ಯಕ್ಕೆ ರ್ಯಾಂಕ್ ಬರುತ್ತೆ ಎಂದುಕೊಂಡಿರಲಿಲ್ಲ. ಮೂರನೇಯ ರ್ಯಾಂಕ್ ಬಂದಿರುವುದು ತುಂಬಾ ಖುಷಿಯಾಗಿದೆ. ಇದಕ್ಕೆಲ್ಲ ಕಾರಣ ನಮ್ಮ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು. ದಿನನಿತ್ಯ ಬೆಳಿಗ್ಗೆ ಐದು ಗಂಟೆಗೆ ಎದ್ದು ಓದುವ ಪರಿಪಾಠ ಬೆಳೆಸಿಕೊಂಡಿದ್ದೆ. ಮತ್ತೆ ಸಂಜೆ ಮನೆಗೆ ವಾಪಾಸಾಗಿ ದಿನನಿತ್ಯದ ಪಾಠಗಳನ್ನು ಆಯಾಯ ದಿನಗಳಲ್ಲಿ ಓದುತ್ತಿದ್ದೆ. ಪರೀಕ್ಷಾ ಅವಧಿಯಲ್ಲಿ ವೇಳಾಪಟ್ಟಿ ತಯಾರಿಸಿ ಅದರಂತೆಯೇ ಓದುವ ಪರಿಪಾಠವನ್ನು ಬೆಳೆಸಿಕೊಂಡಿದ್ದೆ ಎಂದರು.
‘ಯಾವುದೇ ಟ್ಯೂಷನ್ಗೆ ಹೋಗಿರಲಿಲ್ಲ. ಕಾಲೇಜಿನ ಪಾಠ, ಪ್ರವಚನ ಹಾಗೂ ಕೋಚಿಂಗ್ ತರಗತಿಯ ತರಬೇತಿ ನನಗೆ ಅಂಕವನ್ನು ಪಡೆದು ಕೊಳ್ಳಲು ಸಹಾಯವಾಗಿದೆ. ನನಗೆ ಮುಂದೆ ಸಾಫ್ಟ್ವೇರ್ ಇಂಜಿನಿಯರ್ ಆಗಬೇಕು ಎಂಬ ಆಸೆ ಇದೆ ಎಂದು ಅವರು ತಿಳಿಸಿದರು.