ಮಂಗಳೂರು ನ 05: ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಸಂಕಷ್ಟ ಎದುರಾಗುವ ಲಕ್ಷಣ ಗೋಚರಿಸಿದೆ. ಕಂಬಳಕ್ಕೆ ಅವಕಾಶ ನೀಡಿರುವ ಅಧ್ಯಾದೇಶದ ಕುರಿತಂತೆ ಪೆಟಾದವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇದೀಗ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಹೀಗಾಗಿ ಆತಂಕವೂ ಹೆಚ್ಚಿದೆ.
ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಆಧ್ಯಾದೇಶ ಜಾರಿ ಮಾಡಿರುವ ರೀತಿ ಸರಿಯಿಲ್ಲ. ಅದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿ ಪೆಟಾದ ಪರ ಅದರ ಅಧಿಕೃತ ಪ್ರತಿನಿಧಿಯಾಗಿ ಮಣಿಲಾಲ್ ವಲ್ಲಿಯಟ್ಟೆ ಸೆಪ್ಟೆಂಬರ್ 23 ರಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಅಕ್ಟೋಬರ್ 23 ರಂದು ಸ್ವೀಕಾರವಾಗಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ , ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನವೆಂಬರ್ 4 ರಂದು ಅರ್ಜಿಯನ್ನು ವಿಚಾರಣೆಯನ್ನು ಕೈಗೆತ್ತಿಕೊಂಡು ಸೋಮವಾರಕ್ಕೆ ಮುಂದೂಡಿದೆ. ಕಂಬಳಕ್ಕೆ ಅವಕಾಶ ನೀಡಿ ಪ್ರಸ್ತುತ ಜಾರಿಯಲ್ಲಿರುವ ಅಧ್ಯಾದೇಶ ಹಾಗೂ ಸದ್ಯದಲ್ಲೇ ಮಸೂದೆ ವಿಧಾನ ಸಭೆಯ ಅಧಿವೆಶನದಲ್ಲಿ ಅನುಮೋದನೆಗೊಳ್ಳುವ ನಿರೀಕ್ಷೆಯಲ್ಲಿ ಈಗಾಗಲೇ ಕಂಬಳ ಆಯೋಜನೆಗೆ ವೇಳಾಪಟ್ಟಿಯನ್ನು ಸಿದ್ಧಪಡಿಸಿ ದಿನಾಂಕ ಘೋಷಿಸಲಾಗಿದೆ. ನವೆಂಬರ್ 11 ರಂದು ಮೂಡಬಿದಿರೆಯಲ್ಲಿ ಪ್ರಥಮವಾಗಿ ಕಂಬಳ ನಿಗದಿಪಡಿಸಲಾಗಿದ್ದು ಸಿದ್ಧತೆ ನಡೆದಿದೆ. ಆದ್ರೆ ಇದೀಗ ಮತ್ತೆ ಕಂಬಳದ ಮೇಲೆ ಆತಂಕದ ಛಾಯೆ ಗೋಚರಿಸಿದೆ