ಗಂಗೊಳ್ಳಿ, ಏ 20 (DaijiworldNews/HR): ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಕೇರಳ ಮಾದರಿಯ ಔಟ್ ಡೋರ್ ಬಂದರಿನ ಒಂದನೇ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತು ಎರಡು ವರ್ಷಗಳಾದರೂ ಕಾಮಗಾರಿ ಆರಂಭಗೊಂಡಿಲ್ಲ. ಸಹನೆ, ತಾಳ್ಮೆ ಕಳೆದುಕೊಳ್ಳುತ್ತಿರುವ ಈ ಭಾಗದ ಮೀನುಗಾರರು, ಕಾಮಗಾರಿಯನ್ನು ಪ್ರಾರಂಭಿಸುವಂತೆ ರಾಜ್ಯದ ಮುಖ್ಯಮಂತ್ರಿಗಳು, ಇಲಾಖೆ ಸಚಿವರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೀಡಿದ ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಈ ಸಂಬಂಧ ಸೂಕ್ತ ಪರಿಹಾರ ಮತ್ತು ಭರವಸೆ ದೊರಕದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಕೆ.ಎಂ.ವಾಸುದೇವ ಖಾರ್ವಿ ತಿಳಿಸಿದ್ದಾರೆ.
ಮರವಂತೆ ಹೊರಬಂದರು ಪ್ರದೇಶದಲ್ಲಿ ಗುರುವಾರ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಸುಮಾರು 10 ಸಾವಿರಕ್ಕೂ ಮಿಕ್ಕಿ ಜನರು ಮರವಂತೆ ಬಂದರನ್ನು ಅವಲಂಬಿಸಿದ್ದಾರೆ. ಬದುಕಿಗಾಗಿ ಹೋರಾಟ ನಡೆಸುತ್ತಿರುವ ಈ ಭಾಗದ ಮೀನುಗಾರರಿಗೆ ಸರಕಾರ ಮೀನುಗಾರರಿಗೆ ದುಡಿಯಲು ಬಿಡುತ್ತಿಲ್ಲ. ಅಪೂರ್ಣ ಕಾಮಗಾರಿಯಿಂದ ಮೀನುಗಾರರ ಮನೆ, ಸ್ವತ್ತುಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಮಳೆಗಾಲದಲ್ಲಿ ತೂಫಾನ್ ಪ್ರಾರಂಭವಾದರೂ ಮೀನುಗಾರರಿಗೆ ಮೀನುಗಾರಿಕೆಗೆ ತೆರಳು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. 4 ರಿಂದ 5 ಸಾವಿರ ಮಂದಿ ಮೀನುಗಾರರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಮೀನುಗಾರರು ಬೀದಿಗೆ ಬರುವ ಸಾಧ್ಯತೆಗಳಿದ್ದು, ಮಳೆಗಾಲದ ಒಳಗಾಗಿ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಈಗ ನಿರ್ಮಿಸಲಾಗಿರುವ ಹೊರ ಬಂದರು ಕೊಚ್ಚಿ ಹೋಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈಗ ಮತ್ತು ಈ ಹಿಂದೆ ಆಡಳಿತ ನಡೆಸಿದ ಸರಕಾರಗಳು, ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಮರವಂತೆ ಬಂದರಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದ್ದು, ಬಂದರು ಹಂತ ಹಂತವಾಗಿ ಕುಸಿತಕ್ಕೊಳಗಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಂದರು ಕಾಣಲು ಸಿಗುದಿಲ್ಲ. ಮುಂದಿನ ದಿನಗಳಲ್ಲಿ ಮೀನುಗಾರರು ಗಂಗೊಳ್ಳಿ ಅಥವಾ ಭಟ್ಕಳ ಬಂದರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಹೊಂದಿಲ್ಲ. ಪ್ರತಿವರ್ಷ ಮೀನುಗಾರರು ತಮ್ಮ ದುಡಿಮೆ ಹಣದಲ್ಲೇ ಸುಮಾರು 25 ಲಕ್ಷ ರೂ. ಖರ್ಚು ಮಾಡಿ ದೋಣಿ ನಿಲುಗಡೆಗೆ ಕೆರೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದು, ಮೀನುಗಾರರ ಪರಿಸ್ಥಿತಿ ತುಂಬಾ ಕಷ್ಟವಿದೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸಹಿತ ಯಾರಿದಂದಲೂ ಯಾವುದೇ ಕೆಲಸ ಆಗುತ್ತಿಲ್ಲ. ಚುನಾವಣೆ ಸಂದರ್ಭ ಕಾರ್ಯಕ್ರಮಗಳಿಗೆ ಜನ ಸೇರಿಸಲು ಮೀನುಗಾರರನ್ನು ಬಳಸಿಕೊಳ್ಳುತ್ತಾರೆಯೇ ಹೊರತು ಮೀನುಗಾರರ ಸಮಸ್ಯೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಾಗೂ ಮರವಂತೆ ಬಂದರು ವಿಚಾರದಲ್ಲಿ ಸರಕಾರದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳದಿರುವ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದರು.
ಮರವಂತೆ ಮೀನುಗಾರರ ಸೇವಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರ ಖಾರ್ವಿ ಮಾತನಾಡಿ, ಮೀನುಗಾರಿಕೆ ಪ್ರಾರಂಭವಾಗಿ 8 ತಿಂಗಳು ಕಳೆದಿದ್ದರೂ, ಸರಕಾರ ಈವರೆಗೆ ಕೇವಲ 360 ಲೀಟರ್ ಸೀಮೆಎಣ್ಣೆ ಮಾತ್ರ ನೀಡಿದೆ. ಪ್ರತಿ ತಿಂಗಳು 300 ಲೀಟರ್ ಸೀಮೆಎಣ್ಣೆ ನೀಡುವುದಾಗಿ ಭರವಸೆ ನೀಡಿದ್ದ ಸರಕಾರ ಸೀಮೆಎಣ್ಣೆ ನೀಡದೆ ಮೀನುಗಾರರನ್ನು ವಂಚಿಸುತ್ತಿದೆ. ಮುಖ್ಯಮಂತ್ರಿಗಳ ಸಹಿತ ಕೇಂದ್ರ ಮತ್ತು ರಾಜ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಖುದ್ದಾಗಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸರಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮರವಂತೆ ಮೀನುಗಾರರ ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಮೋಹನ ಖಾರ್ವಿ, ಸೋಮಯ್ಯ ಖಾರ್ವಿ, ಮಾರ್ಕೇಟಿಂಗ್ ಸಮಿತಿ ಅಧ್ಯಕ್ಷ ಎಂ.ಶಂಕರ ಖಾರ್ವಿ ಮಾತನಾಡಿದರು. ಮಾಜಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷ ಸುರೇಶ ಖಾರ್ವಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಧರ ಖಾರ್ವಿ ಸ್ವಾಗತಿಸಿ ವಂದಿಸಿದರು.