ಉಡುಪಿ, ಏ 20 (DaijiworldNews/HR): ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಪ್ರಿಲ್ 20 ರಂದು ಉಡುಪಿ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಉಡುಪಿ ತಾಲ್ಲೂಕು ಕಚೇರಿಯವರೆಗೆ ಬೃಹತ್ ಪಾದಾಯಾತ್ರೆ ನಡೆಯಿತು. ಚೆಂಡೆ, ವಾದ್ಯ ಘೋಷಗಳ ನಡುವೆ ಕೇಸರಿ ಬಾವುಟ ಹಿಡಿದುಕೊಂಡ ಸುಮಾರು 10 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದು ಯಶ್ ಪಾಲ್ ಸುವರ್ಣರಿಗೆ ಬೆಂಬಲ ಸೂಚಿಸಿದರು. ಈ ಸಂಧರ್ಭದಲ್ಲಿ ಉಡುಪಿ ಶಾಸಕರಾದ ರಘುಪತಿ ಭಟ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಸಚಿವರಾದ ಸುನಿಲ್ ಕುಮಾರ್, ಮತ್ತು ಇತರ ನಾಯಕರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್ ಪಾಲ್ ಸುವರ್ಣ, ಉಡುಪಿ ಯನ್ನು ಮಾದರಿ ಕ್ಷೇತ್ರ ವನ್ನಾಗಿ ಮಾಡುವ ಗುರಿ ನನ್ನದು. ಡಾಕ್ಟರ್ ವಿ ಎಸ್ ಆಚಾರ್ಯ ಅವರ ಉಡುಪಿಯ ಕನಸನ್ನು ನನಸು ಮಾಡುವ ಗುರಿಯನ್ನು ನಾನು ಹೊಂದಿದ್ದೇನೆ. ಅವರ ಅಭಿವೃದ್ದಿಯ ಕನಸನ್ನು ನನಸು ಮಾಡಿ ಉಡುಪಿಯನ್ನು ೨೨೪ ಕ್ಷೇತ್ರಗಳಲ್ಲಿಯೇ ಮಾದರಿ ಕ್ಷೇತ್ರವಾಗಿ ಮಾಡುತ್ತೆನೆ. ಈಗಾಗಲೇ ರಘುಪತಿ ಭಟ್ ರಿಂದ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿವೆ. ಸರ್ಕಾರಿ ಮೆಡಿಕಲ್ ಕಾಲೇಜು, ೨೪ ಗಂಟೆ ಕುಡಿಯುವ ನೀರಿನ ಯೋಜನೆ, ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಮೀನುಗಾರಿಕೆ ಕ್ಷೇತ್ರವನ್ನು ಬಲಗೊಳಿಸುವುದು, ಉದ್ಯೋಗ ಸೃಷ್ಟಿ, ನನ್ನ ಮೊದಲ ಆದ್ಯತೆ ಆಗಲಿದೆ. ಇಂದು ಸಹಸ್ರ ಸಂಖ್ಯೆಯ ಕಾರ್ಯಕರ್ತರು ಪಾದಾಯಾತ್ರೆಯಲ್ಲಿ ಭಾಗಿಯಾಗಿದ್ದಾರೆ, ಅವರೆಲ್ಲರಿಗೂ ನನ್ನ ಧನ್ಯವಾದಗಳು. ಉಡುಪಿಯಲ್ಲಿ ಎಲ್ಲಾ ೫ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದೇವೆ ಎಂದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಕಡಿಯಾಳಿಯ ಬಿ.ಜೆ.ಪಿ. ಕಛೇರಿಯ ಬಳಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, "ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ದಾಖಲೆ ನಿರ್ಮಾಣ ಆಗುತ್ತದೆ ಎಂದು ಈ ಸಭೆಯನ್ನು ನೋಡಿದರೆ ಸ್ಪಷ್ಟವಾಯಿತು. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಅಂತರದಲ್ಲಿ ಗೆಲುವು ಪಡೆದ ದಾಖಲೆ ನನ್ನ ಪಾಲಿಗಿದೆ. ಆದರೆ ಆ ಒಂದು ದಾಖಲೆಯನ್ನು ಮುರಿದು ಯಶ್ ಪಾಲ್ ಸುವರ್ಣಾರು 60,000 ಸಾವಿರಕ್ಕಿಂತಲೂ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ.ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಉಡುಪಿಗೆ ಬಂದು ಪ್ರಮೋದ್ ಮಧ್ವರಾಜ್ ಹೋದರೆ ನಷ್ಟ ಇಲ್ಲ ಎಂದಿದ್ದರು. ಆದರೆ, ಎಷ್ಟು ನಷ್ಟ ಇದೆ ಕಾಂಗ್ರೆಸ್ ಗೆ ಎಂದು ಈ ಬಾರಿಯ ಚುನಾವಣೆಯಿಂದ ಅವರಿಬ್ಬರಿಗೆ ಉತ್ತರ ಸಿಗುತ್ತದೆ. ಯಶ್ ಪಾಲ್ ರ ಐತಿಹಾಸಿಕ ಗೆಲುವು ಆಗುತ್ತೆ. ನನ್ನ ಮತ್ತು ರಘುಪತಿ ಭಟ್ ರ ಅಭಿವೃದ್ಧಿ ಕೆಲಸಗಳನ್ನು ಮೀರಿಸಿ ಯಶ್ ಪಾಲ್ ಸುವರ್ಣಾರು ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗುತ್ತಾರೆ" ಎಂದರು.
ಇನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ , "ಕಳೆದ ಮೂರು ಅವಧಿಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ರ ವಿಶೇಷವಾದ ಪರಿಶ್ರಮ ಮತ್ತು ಶ್ರದ್ಧೆಯಿಂದ ಉಡುಪಿಯ ಅಭಿವೃದ್ಧಿ ಚಟುವಟಿಕೆಗಳು ಯಾವ ರೀತಿಯ ಹೊಸ ಆಯಾಮವನ್ನು ತೆಗೆದುಕಂಡಿತ್ತು ಎಂದು ನಾವೆಲ್ಲಾ ನೋಡಿದ್ದೇವೆ. ಆ ಅಭಿವೃದ್ಧಿ ಚಟುವಟಿಕೆಗಳನ್ನ ಮುಂದುವರೆಸಲು ಬಿ.ಜೆ.ಪಿ.ಯನ್ನ, ಯಶ್ ಪಾಲ್ ರನ್ನ ಉಡುಪಿ ಜಿಲ್ಲೆಯ ಜನ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ" ಎಂದು ಹೇಳಿದರು.
ಶಾಸಕ ರಘುಪತಿ ಭಟ್ ಮಾತನಾಡಿ, "ಯಶ್ ಪಾಲ್ ರನ್ನು ಗೆಲ್ಲಿಸಲು ನಮ್ಮ ಪೂರ್ತಿ ಸಮಯ, ಮನಸ್ಸು, ಕ್ಷಮತೆಯನ್ನು ಕೊಟ್ಟು ಕೆಲಸ ಮಾಡಬೇಕು. ಯಶ್ ಪಾಲ್ ಪ್ರತಿ ಚುನಾವಣೆಯಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಕಾರ್ಯಕರ್ತ.ನಗರ ಸಭೆಯಲ್ಲಿ ಆಡಳಿತ ಮಾಡಿದ ಅನುಭವ ಇದೆ. ನಷ್ಟದಲ್ಲಿ ಇದ್ದ ಮೀನುಗಾರಿಕಾ ಫೆಢರೇಶನ್ ಅನ್ನು ಲಾಭದತ್ತ ಕೊಂಡೊಯ್ಯದವರು ಯಶ್ ಪಾಲ್. ಯಶ್ ಪಾಲ್ ಅಧ್ಯಕ್ಷರಾದ ಮೇಲೆ ಮೀನುಗಾರರಿಗೆ ಸಹಾಯ ಆಯಿತು. ಪಕ್ಷ ದೂರದೃಷ್ಟಿ ಇಟ್ಟುಕಂಡು ಒಳ್ಳೆಯ ಅಭ್ಯರ್ಥಿಯನ್ನೇ ಕೊಟ್ಟಿದ್ದಾರೆ. ನಮಗೆ ಆತ್ಮ ವಿಶ್ವಾಸ ಇದೆ ಬಹಳ ಲೀಡ್ ಅಲ್ಲಿ ಗೆಲ್ಲುತ್ತೇವೆ ಎಂದು ಆದರೆ ಅದು ಅತೀ ವಿಶ್ವಾಸ ಆಗಬಾರದು" ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ, ಮಟ್ನಾರ್ ರತ್ನಾಕರ್ ಹೆಗ್ಡೆ, ದ.ಕನ್ನಡ ಮತ್ತು ಉಡುಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ,,ಚುನಾವಣಾ ಉಸ್ತುವಾರಿಯಾದ ಗಣೇಶ್ ಹೊಸಪೇಟೆ,ರಾಷ್ಟ್ರೀಯ ಒ.ಬಿ.ಸಿ. ಅಧ್ಯಕ್ಷ ಎಲ್.ಜಿ.ಮಸಾನಿ,, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆಯಾದ ವೀಣಾ ನಾಯ್ಕ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಬಿ.ಜೆ.ಪಿ.ಯ ವಕ್ತಾರ ರಾಘವೇಂದ್ರ ಕಿಣಿ,ಕಾಪು ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.