ಉಡುಪಿ, ಮಾ25(SS): ನಾನು ಗೆದ್ದು ಬಂದರೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸೇವಕನಾಗುತ್ತೇನೆ ಎಂದು ಮಾಜಿ ಸಚಿವ, ಉಡುಪಿ- ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬ್ರಹ್ಮಗಿರಿ ಕಾಂಗ್ರೆಸ್ನ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಅವರು, ಶಾಸಕ - ಮಂತ್ರಿಯಾಗಿ ಜವಾಬ್ದಾರಿಯುತ ಕೆಲಸದ ಒತ್ತಡಕ್ಕೆ ಸಿಲುಕಿ ಪಕ್ಷದ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದ ಪರಿಣಾಮ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲುಂಡಿದ್ದೇನೆ. ನನಗೆ ಕೆಟ್ಟ ಮೇಲೆ ಬುದ್ಧಿ ಬಂದಿದ್ದು, ನಾನು ಗೆದ್ದು ಬಂದರೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸೇವಕನಾಗುತ್ತೇನೆ ಎಂದು ಹೇಳಿದ್ದಾರೆ.
ಕೆಲಸದ ಒತ್ತಡದಿಂದ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಆ ತಪ್ಪಿನ ಅನುಭವ ನನಗಾಗಿದೆ. ನಾನು ಕಾಂಗ್ರೆಸ್, ಜೆಡಿಎಸ್ನ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಗೆದ್ದರೆ ಕಾರ್ಯಕರ್ತರು, ಜನರೊಂದಿಗೆ ಬೆರೆತು ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಕೈ ಹಿಡಿಯಬೇಕು ಎಂದು ಮತದಾರ ಪ್ರಭುಗಳಲ್ಲಿ ಮನವಿ ಮಾಡಿದ್ದಾರೆ.
ಪಕ್ಷದ ಕಾರ್ಯಕರ್ತರು ಮನಸ್ಸು ಮಾಡಿದರೆ ಯಾವ ಅಭ್ಯರ್ಥಿಯನ್ನು ಬೇಕಾದರೂ ಗೆಲ್ಲಿಸಬಹುದು. ಇಷ್ಟವಿಲ್ಲದೇ ಹೋದರೆ ಸೋಲಿಸಬಹುದು. ಈ ಬಗ್ಗೆ ನನಗೆ ಕಳೆದ ಚುನಾವಣೆಯಲ್ಲಿ ಅರಿವಾಗಿದೆ. ಅದರಿಂದ ಸಾಕಷ್ಟು ಪಾಠ ಕಲಿತಿದ್ದೇನೆ ಎಂದು ತಿಳಿಸಿದರು.
ಈ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ನೀವೇ ತೆಗೆದುಕೊಂಡು ಪ್ರಮೋದ್ ಮಧ್ವರಾಜ್ ಎನ್ನುವ ಪ್ರೊಡಕ್ಟ್ನ್ನು ಮಾರ್ಕೆಂಟಿಗ್ ಮಾಡಿ. ನನ್ನ ಒಳ್ಳೆತನ ಎತ್ತಿ ಹಿಡಿದು ಪ್ರಚಾರ ಮಾಡಿ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.
ಮೈತ್ರಿ ಧರ್ಮದಂತೆ ಪಕ್ಷದ ವರಿಷ್ಠರು 8 ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದು, ಮರಳಿ ಪಡೆಯಲು ಸಾಧ್ಯವಿಲ್ಲ. ನಾನು ಸ್ಪರ್ಧಿಸದಿದ್ದರೆ ಜೆಡಿಎಸ್ನ ಭೋಜೆಗೌಡರು ನಿಲ್ಲುತ್ತಿದ್ದರು. ಕಾಂಗ್ರೆಸ್ ಪ್ರಾಬಲ್ಯವಿರುವ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಉಳಿವು ಹಾಗೂ ಭವಿಷ್ಯದ ಹಿತಾದೃಷ್ಟಿಯಿಂದ ಹಿರಿಯರ ಅನುಮತಿ ಪಡೆದು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಎಂಪಿಯನ್ನು ಆಯ್ಕೆ ಮಾಡಿ ಎಂದು ವಿನಂತಿಸಿದ್ದಾರೆ.