ಮಂಗಳೂರು, ಏ 20 (DaijiworldNews/MS): ಅಧಿಕ ಲಾಭ ಗಳಿಸುವ ಉದ್ದೇಶದಿಂದ ತಾನು ಆ್ಯಪ್ ಒಂದರಲ್ಲಿ ಹಣ ಹೂಡಿಕೆ ಮಾಡಿ ಬಳಿಕ 10.25 ಲಕ್ಷ ರೂ.ವನ್ನು ಕಳೆದುಕೊಂಡಿರುವುದಾಗಿ ವ್ಯಕ್ತಿಯೊಬ್ಬರು ಮಂಗಳೂರು ಸೆನ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರು ಕಳೆದ ವರ್ಷ ಇನ್ಸ್ಸ್ಟಾಗ್ರಾಮ್ ಖಾತೆ ಪರಿಶೀಲನೆ ಮಾಡುತ್ತಿದ್ದಾಗ, ಕ್ರಿಕೆಟಿಗ ಸುರೇಶ್ ರೈನಾ ಬ್ರಾಂಡ್ ಅಂಬಾಸೆಡರ್ ಆಗಿದ್ದ ಆ್ಯಪ್ ನೋಡಿದ್ದರು. ಅದರಲ್ಲಿ ಹಣ ಹೂಡಿಕೆಯಿಂದ ಲಾಭಗಳಿಸಬಹುದು ಎಂದು ಪ್ರಚಾರ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿ ಲಾಭಗಳಿಸಬಹುದು ಎಂದು ಮನಗಂಡ ದೂರುದಾರರು 2022ರ ಆಗಸ್ಟ್ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರು. ಬಳಿಕ ಹಂತ ಹಂತವಾಗಿ 60,000 ರೂ., 70,000 ರೂ., 3.80 ಲಕ್ಷ ರೂ., 4.15 ಲಕ್ಷ ರೂ. ಹೀಗೆ ಒಟ್ಟು 10.25 ಲಕ್ಷ ರೂ. ಹೂಡಿಕೆ ಮಾಡಿದ್ದರು.
ಮೊದಲು ಲಾಭಾಂಶ ನೀಡಿದ್ದ ಆ್ಯಪ್ನಿಂದ ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪ್ಲಿಕೇಷನ್ನಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳಾದ ಅಬ್ಬಾಸ್ ಹುಸೇನ್ ಶಾಹಿಲ್, ವೈಭವ್ ಗೋವಿಂದ್ ಸಾವಂತ್ ಮತ್ತು ಲೋಕೇಶ್ ಕಿಶೋರ್ ಜಾದವ್ ನಕಲಿ ವೆಬ್ಸೈಟ್ನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಹಾಕಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.