ಮಂಗಳೂರು, ಮಾ25(SS): ಬಿಜೆಪಿ ಸಂಸದರ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಾಧನೆಯಾಗಿಲ್ಲ, ಬದಲಾಗಿ ಎಲ್ಲವನ್ನೂ ಮಾರಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪ ಮಾಡಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಮಲ್ಯರಿಂದ ಹಿಡಿದು ಎಲ್ಲ ಕಾಂಗ್ರೆಸ್ ಸಂಸದರು ಎನ್ಐಟಿಕೆ, ಹೆದ್ದಾರಿಗಳು, ಬಂದರು, ಎಂಆರ್ಪಿಎಲ್ ಇತ್ಯಾದಿಗಳನ್ನು ಮಾಡಿದ್ದಾರೆ. ಆದರೆ ಬಿಜೆಪಿ ಸಂಸದರ ಕಾಲದಲ್ಲಿ ಯಾವುದೇ ಸಾಧನೆಯಾಗಿಲ್ಲ, ಬದಲಾಗಿ ಎಲ್ಲವನ್ನೂ ಮಾರಲು ಹೊರಟಿದ್ದಾರೆ ಎಂದು ದೂರಿದ್ದಾರೆ.
ಎಲ್ಲ ವೈಫಲ್ಯಗಳಿಗೂ ಸಬೂಬು ನೀಡುತ್ತಿರುವ ಸಂಸದ ನಳಿನ್ಗೆ ಇಚ್ಛಾಶಕ್ತಿ ಇದ್ದಿದ್ದರೆ ತನ್ನದೇ ಸರಕಾರದಲ್ಲಿ ಉತ್ತಮ ಕೆಲಸ ಮಾಡಬಹುದಿತ್ತು.ವಿಪರ್ಯಾಸ ಅಂದರೆ, ಬಿಜೆಪಿ ನಾಯಕರೇ ಅವರನ್ನು ಕಳಪೆ ಸಂಸದ ಎಂದು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ಜಂಟಿ ಚುನಾವಣಾ ಸಮಿತಿ ರಚಿಸಲಾಗಿದೆ. ಸರಕಾರದ ಆಶಯದಂತೆ ಕರಾವಳಿಯಲ್ಲೂ ಸಮ್ಮಿಶ್ರವಾಗಿ ಚುನಾವಣೆ ಎದುರಿಸಲು ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯ ಉಭಯ ಪಕ್ಷದ ಹಿರಿಯರು ಸೇರಿಕೊಂಡು ಜಂಟಿ ಸಮಿತಿ ರಚಿಸಿ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ.