ಬಂಟ್ವಾಳ, ಏ 18 (DaijiworldNews/SM): ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಹೊಟೇಲ್ ಒಂದಕ್ಕೆ ಕಳ್ಳರು ನುಗ್ಗಿ, ಸಾವಿರಾರು ನಗದು ದೋಚಿದ ಘಟನೆ ಎ. 18ರಂದು ಮಂಗಳವಾರ ಬೆಳಕಿಗೆ ಬಂದಿದೆ.
ಬಿಸಿರೋಡಿನ ಕಿಶೋರ್ ಎಂಬವರ ಮಾಲಕತ್ವದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಕೃಷ್ಣ ವಿಲಾಸ ಹೋಟೆಲ್'ನಿಂದ ಕಳವು ಮಾಡಲಾಗಿದೆ. ಹೊಟೇಲ್ ನ ಬೀಗವನ್ನು ಮುರಿದು ಶಟರ್ ತೆಗದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್'ನಲ್ಲಿದ್ದ ಸುಮಾರು 30 ಸಾವಿರಕ್ಕಿಂತಲೂ ಅಧಿಕ ನಗದನ್ನು ದೋಚಿಕೊಂಡು ಹೋಗಿದ್ದಾರೆ.
ಕಳವು ನಡೆಸಿದ ಯುವಕರು ಹೋಟೆಲ್ ಹೊರಗಡೆ ಹಾಕಿರುವ ಸಿ.ಸಿ.ಕ್ಯಾಮರಾವನ್ನು ಮೇಲೆ ತಿರುಗಿಸಿ ಅ ಬಳಿಕ ಬೀಗ ಮುರಿದಿದ್ದಾರೆ. ಸುಮಾರು 1 ಗಂಟೆ 50 ನಿಮಿಷಕ್ಕೆ ಕಳ್ಳತನ ಮಾಡಲು ಬರುವ ದೃಶ್ಯ ಸಿ.ಸಿ.ಟಿ.ಯಲ್ಲಿ ಸೆರೆಯಾಗಿದೆ. ಆ ಬಳಿಕ ಹೊಟೇಲ್ ಒಳಗಡೆ ನುಗ್ಗಿದ ಕಳ್ಳ ತಲೆಗೆ ಟೋಪಿ ಹಾಕಿ,ಮುಖಕ್ಕೆ ಟವೆಲ್ ಕಟ್ಟಿ ಕ್ಯಾಸ್ ನಲ್ಲಿರುವ ನಗದನ್ನು ಕಳವು ಮಾಡುತ್ತಿರುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.
ಕೆಲ ಸಮಯಗಳಿಂದ ಕಳವು ಪ್ರಕರಣಗಳು ಕಡಿಮೆಯಾಗಿದ್ದು,ಇದೀಗ ಮತ್ತೆ ಕಳ್ಳರು ಕೈ ಚಳಕಕ್ಕೆ ಮುಂದಾಗಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಬಂಟ್ವಾಳ ಅಲ್ಲದೆ ಹೊರಗಿನಿಂದ ತರಿಸಲಾದ ಸಾಕಷ್ಟು ಪೊಲೀಸರು ಇದ್ದರೂ, ರಾತ್ರಿ ಪಾಳಿಯಲ್ಲಿ ಇದ್ದರೂ ಕಳ್ಳರು ಕ್ಯಾರಿಲ್ಲದೆ ಕಳ್ಳತನ ಮಾಡುತ್ತಾರೆ ಎಂದರೆ ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.