ಉಡುಪಿ, ಏ17 (DaiiworldNews/HR): ಅಣ್ಣಾಮಲೈ ಅವರ ಹೆಲಿಕಾಪ್ಟರ್ ಮತ್ತು ಕಾರು ಮತ್ತು ಅವರು ತಂಗಿರುವ ರೂಂ ಗಳಲ್ಲಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಅಂಶಗಳು ಕಂಡು ಬಂದಿಲ್ಲ ಎಂದು ಉಡುಪಿ ವಿಧಾನಸಭಾ ವ್ಯಾಪ್ತಿಯ ಚುನಾವಣಾ ಅಧಿಕಾರಿ ಸ್ವಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಗೊಳಿಸಿರುವ ಅವರು, "ಕನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ ತಮಿಳುನಾಡು ಇದ ಅಧ್ಯಕ್ಷ ರಾಗಿರುವ ಅಣ್ಣಾಮಲೈ, ಇವರು ದಿನಾಂಕ:17-04-2023 ರ ಪೂರ್ವಾಹ್ನ 9.55 ಕ್ಕೆ ಹೆಲಿಕಾಪ್ಟರ್ ಮುಖಾಂತರ ಉಡುಪಿಗೆ ಆಗಮಿಸಿದ್ದು, ಸದರಿಯವರು ಬಂದ ಹಲಿಕಾಪ್ಟರ್ ಅನ್ನು ಹಾಗೂ ಅವರ ಬಳಿ ಬ್ಯಾಗ್ ಇದ್ದು, ಸದ್ರಿ ಬ್ಯಾಗನ್ನು ಎಫ್ಎಸ್ ತಂಡದ ಮುಖ್ಯಸ್ಮರಾದ ರಾಘವೇಂದ್ರ ಮತ್ತು ವಿಜಯಾ ಎಂಸಿಸಿ ನೋಡಲ್ ಅಧಿಕಾರಿ 120 ಉಡುಪಿ ವಿಧಾನಸಭಾ ಕ್ಷೇತ್ರ ಪರಿಶೀಲಿಸಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ ಎಂದು ವರದಿ ನೀಡಿರುತ್ತಾರೆ.
ಹಲಿಪ್ಯಾಡ್ ನಿಂದ ಕಲಂಕ ಮಾರ್ಗವಾಗಿ ನೇರವಾಗಿ ಹೋಟೆಲ್ ವೊಂದಕ್ಕೆ ಆಗಮಿಸಿದ್ದು, ಅಲ್ಲಿ ಅವರು ಪ್ರಯಾಣಿಸಿದ ವಾಹನವನ್ನು ಎಫ್ಎಸ್ ತಂಡದ ಮುಖ್ಯಸ್ಥರಾದ ರೋಷನ್ ಕುಮಾರ್ ಮತ್ತು ಜಿಎಸ್ಟಿ ತಂಡದವರು ತಪಾಸಣೆ ನಡೆಸಿ ವಾಹನದಲ್ಲಿ ಒಂದು ಬ್ಯಾಗ್ ಇದ್ದು ಅದರಲ್ಲಿ 2 ಜೊತೆ ಬಟ್ಟೆಗಳು ಹಾಗೂ ಕುಡಿಯುವ ನೀರಿನ ಬಾಟಲ್ ಗಳು ಮಾತ್ರ ಇರುವುದನ್ನು ಗಮನಿಸಿ ವರದಿಯನ್ನು ಸಲ್ಲಿಸಿರುತ್ತಾರೆ. ಈ ಬಾರಿಯೂ ಕೂಡಾ ಮಾದರಿ ನೀತಿ ಸಂಹಿತ ಉಲ್ಲಂಘನೆಯಾದಂತಹ ಅಂಶಗಳು ಕಂಡು ಬಂದಿರುವುದಿಲ್ಲ ಎಂದು ವರದಿ ನೀಡಿರುತ್ತಾರೆ
ತದನಂತರ ಆದೇ ವಾಹನದಲ್ಲಿ 121- ಕಾಪು ವಿಧಾನಸಭಾ ಕ್ಷೇತ್ರಕ್ಕೆ, ತೆರಳುವುದಾಗಿ ತಿಳಿಸಿ ಹೊಟೇಲ್ ನಿಂದ ನಿರ್ಗಮಿಸಿದರು, ಉಡುಪಿ ಕಾಪು ಮಾರ್ಗದಲ್ಲಿ ಉದ್ಯಾವರ ಚಕ್ ಪೋಸ್ಟ್ ನ ಎಸ್ಎಸ್ಟಿ ತಂಡವು ಮತ್ತೊಮ್ಮೆ ಪರಿಶೀಲನೆ ಮಾಡಿದ್ದು ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದಿರುವುದಿಲ್ಲ. ಎಂದು ತಿಳಿಸಿರುತ್ತಾರೆ.
ಅಪರಾಹ್ನ ಸದ್ರಿಯವರು ಸುಮಾರು 2 ಗಂಟೆಗೆ ಕಡಿಯಾಳಿ ಬಳಿ ಇರುವ ಹೋಟೆಲ್ ಗೆ ಆಗಮಿಸಿ ತಾವು ತಂಗಿರುವ ಕೊಠಡಿಯಲ್ಲಿ ಇರುವ ಸಂದರ್ಭದಲ್ಲಿ ಮತ್ತೊಮ್ಮೆ ಇಡೀ ಕೊಠಡಿ ಮತ್ತು ಬ್ಯಾಗ್ ನ್ನು ಪರಿಶೀಲಿಸಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ. ಎಂದು ವರದಿ ನೀಡಿರುತ್ತಾರೆ. ನಂತರ ಅದೇ ವಾಹನದಲ್ಲಿ ಸದರಿಯವರು ಚಿಕ್ಕಮಗಳೂರಿಗೆ ತೆರಳುವುದಾಗಿ ತಿಳಿಸಿ ಹೊಟೇಲ್ ನಿಂದ ನಿರ್ಗಮಿಸಿರುತ್ತಾರೆ.
ಒಟ್ಟಾರೆಯಾಗಿ ಅಣ್ಣಾಮಲೈ, ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ತಮಿಳುನಾಡು ಇವರು 120-ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿರುವುದರಿಂದ ನಿರ್ಗಮನದವರೆಗೂ ಚುನಾವಣಾ ಮಾದರಿ ನೀತಿ ಸಂಹಿತೆಯ ನಿಯಮಾನುಸಾರ ಹಂತ ಹಂತವಾಗಿ ಪರಿಶೀಲನೆ ನಡೆಸಿದ್ದು ಯಾವುದೇ ಲೋಪಗಳು ಕಂಡುಬಂದಿರುವುದಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕರೊಬ್ಬರು "ಅಣ್ಣಾಮಲೈ ಉಡುಪಿ ಬಂದಿರುವ ಹೆಲಿಕಾಪ್ಟರ್ ನಲ್ಲಿ ಜಿಲ್ಲೆಗೆ ಹಣದ ಗಂಟನ್ನು ತಂದಿದ್ದಾರೆ" ಎಂದು ಆರೊಪಿಸಿದ್ದರು.